ರೈತರ ಮೇಲಿನ ಎಲ್ಲ ರೀತಿಯ ದೂರುಗಳನ್ನು ಹಿಂಪಡೆಯಲು ತೀರ್ಮಾನಿಸಿದ ಆಕ್ಸಿಸ್ ಬ್ಯಾಂಕ್

ಬೆಂಗಳೂರು, ನ.5- ತೀವ್ರವಿವಾದಕ್ಕೊಳಗಾಗಿದ್ದ ಆಕ್ಸಿಸ್ ಬ್ಯಾಂಕ್ ರೈತರ ವಿರುದ್ಧ ಚೆಕ್ ಬೌನ್ಸ್ ಪ್ರಕರಣದಲ್ಲಿ ಹೊರಡಿಸಿದ್ದ ಅರೆಸ್ಟ್ ವಾರೆಂಟ್‍ನ್ನು ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ದೂರು ಹಿಂಪಡೆಯಲು ಬ್ಯಾಂಕ್ ನಿರ್ಧರಿಸಿದೆ.

ಸಾಲ ವಾಪಸ್ ಪಡೆಯುವ ಸಂಬಂಧ ರೈತರ ಮೇಲೆ ಯಾವುದೇ ರೀತಿಯ ಒತ್ತಡ ಹಾಕಬಾರದೆಂದು ರಾಜ್ಯ ಸರ್ಕಾರ ಮೌಖಿಕ ಆದೇಶ ಹೊರಡಿಸಿದ ಬೆನ್ನಲ್ಲೇ ಆಕ್ಸಿಸ್ ಬ್ಯಾಂಕ್ ರೈತರ ಮೇಲಿನ ಎಲ್ಲ ರೀತಿಯ ದೂರುಗಳನ್ನು ಹಿಂಪಡೆಯಲು ತೀರ್ಮಾನಿಸಿದೆ.

ಬೆಳೆ ಸಾಲ,ಪಂಪ್‍ಸೆಟ್ ಲೋನ್ ಸೇರಿದಂತೆ ರೈತರ ಮೇಲಿನ ಸುಮಾರು 140ಕ್ಕೂ ಹೆಚ್ಚು ದೂರುಗಳನ್ನು ಹಿಂಪಡೆಯಲು ಕ್ರಮ ಕೈಗೊಂಡಿರುವುದಾಗಿ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕು ಆಕ್ಸಿಸ್ ಬ್ಯಾಂಕ್‍ನ ಹಿರಿಯ ವ್ಯವಸ್ಥಾಪಕ ರಾಜ್‍ಕುಮಾರ್ ತಿಳಿಸಿದ್ದಾರೆ.
ನಾವು ಹೊಸದಾಗಿ ಯಾವುದೇ ರೈತರ ಮೇಲೆ ದೂರುಗಳನ್ನು ದಾಖಲು ಮಾಡಿರಲಿಲ್ಲ. ಇವೆಲ್ಲವೂ ಎರಡು ವರ್ಷಗಳ ಹಿಂದೆ ದಾಖಲಾಗಿದ್ದವು. ಈಗ ಸಾಲ ಹಿಂದಿರುಗಿಸುವಂತೆ ಜಿಲ್ಲೆಯ 140 ರೈತರಿಗೆ ನೋಟಿಸ್ ನೀಡಿದ್ದೆವು. ಇದಕ್ಕೆ ಯಾವುದೇ ಉತ್ತರ ಬರದ ಕಾರಣ ಅರೆಸ್ಟ್ ವಾರೆಂಟ್ ನೀಡಲಾಗಿತ್ತು. ಬ್ಯಾಂಕ್‍ನ ಹಿರಿಯ ಅಧಿಕಾರಿಗಳ ಸೂಚನೆಯಂತೆ ಹಿಂಪಡೆದಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಕೋಲ್ಕತ್ತಾದಲ್ಲಿ ನಮ್ಮ ಬ್ರಾಂಚ್ ಇರುವುದರಿಂದ ಸಂಹವನದ ಕೊರತೆ ಉಂಟಾಗಿದೆ. ಅಲ್ಲದೆ ದೀಪಾವಳಿ ಹಬ್ಬವಾಗಿರುವುದರಿಂದ ಈಗ ಬ್ಯಾಂಕ್‍ಗಳಿಗೆ ಸಾಲು ಸಾಲು ರಜೆ ಬಂದಿದೆ. ಹಬ್ಬ ಮುಗಿದ ತಕ್ಷಣ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಈಗಾಗಲೇ ಎಲ್ಲ ದೂರುಗಳನ್ನು ವಾಪಸ್ ಪಡೆದಿರುವುದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ. ಈ ಬಗ್ಗೆ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.
ಪಶ್ಚಿಮ ಬಂಗಾಳ ಕೋರ್ಟ್ ರಜೆ ಮುಗಿದ ಬಳಿಕ ರೈತರ ಮೇಲೆ ದಾಖಲಾಗಿರುವ ಎಲ್ಲ ದೂರುಗಳನ್ನು ಹಿಂಪಡೆಯಲು ಸಿದ್ಧತೆ ನಡೆಸಿರುವುದಾಗಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ