ಬೆಂಗಳೂರು, ನ.4- ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ವೇಳೆ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರನ್ನು ಹಾಕಬಾರದು ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರಿಗೆ ಪತ್ರ ಬರೆದಿರುವ ಅನಂತಕುಮಾರ್ ಹೆಗಡೆ ನ.10ರಂದು ಕರ್ನಾಟ ಸರ್ಕಾರ ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ನನ್ನ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಬಾರದು. ಈ ಜಯಂತಿಗೆ ನನ್ನ ವಿರೋಧ ಇದೆ ಎಂದು ಹೇಳಿದ್ದಾರೆ.
ಇನ್ನು ತಾವು ಪ್ರತಿನಿಧಿಸುವ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಅನಂತಕುಮಾರ್ ಹೆಗ್ಡೆ , ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸುವ ಅಗತ್ಯವಿಲ್ಲ. ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿರುವುದರಿಂದ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಮುದ್ರಣವಾಗಬಾರದೆಂದು ಮನವಿ ಮಾಡಿದ್ದಾರೆ.
ಕಳೆದ ವರ್ಷವೂ ಟಿಪ್ಪು ಜಯಂತಿ ಆಚರಣೆ ವೇಳೆ ಅನಂತಕುಮಾರ್ ಹೆಗ್ಡೆ ತಮ್ಮ ಹೆಸರನ್ನು ಹಾಕದಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದೇ ತಿಂಗಳ 10ರಂದು ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸಲು ತೀರ್ಮಾನಿಸಿದೆ. ಸರ್ಕಾರದ ಈ ಕ್ರಮಕ್ಕೆ ಬಿಜೆಪಿ ಸೇರಿದಂತೆ ಕೆಲ ಹಿಂದುಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.