ಬೆಂಗಳೂರು,ನ.3-ಬೆಂಗಳೂರಿನ ನಿವಾಸಿಗಳಿಗೆ ನಿವೇಶನ ನೀಡಲು ತೀವ್ರ ಸಮಸ್ಯೆಯಾಗುತ್ತಿದ್ದು, ಇದನ್ನು ಬಗೆಹರಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ ಆಸ್ತಿಯನ್ನು ಗುರುತಿಸಿಕೊಳ್ಳಲು ಲ್ಯಾಂಡ್ ಆಡಿಟ್ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಬೆಂಗಳೂರಿನಲ್ಲಿ ಬಿಡಿಎ ಕಚೇರಿಯಲ್ಲಿಂದು ಪ್ರಗತಿಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಿವೇಶನ ಹಂಚಿಕೆ ಮಾಡಬೇಕಾದರೆ ಭೂಮಿಯ ಸಮಸ್ಯೆ ತೀವ್ರವಾಗಿ ಕಾಡಲಾರಂಭಿಸುತ್ತಿದೆ. ಬಿಡಿಎಗೆ ಸಂಬಂಧಿಸಿದ ಭೂಮಿ ಎಲ್ಲಿದೆ, ಎಷ್ಟಿದೆ, ಯಾವ ಸ್ಥಿತಿ ಸ್ಥಿತಿಯಲ್ಲಿದೆ, ನ್ಯಾಯಾಲಯದಲ್ಲಿರುವುದು ಎಷ್ಟು , ತರಕಾರುನಲ್ಲಿರುವ ಭೂಮಿ ಎಷ್ಟು ಎಂಬ ಸ್ಪಷ್ಟ ಮಾಹಿತಿ ಇಲ್ಲ. ಅದನ್ನು ಗುರುತಿಸುವ ಸಲುವಾಗಿ ಭೂ ಆಡಿಟ್ ಆರಂಭಿಸಲಾಗುತ್ತಿದೆ. ಈಗಾಗಲೇ ಟೆಂಡರ್ ಕರೆಯಲಾಗಿದ್ದು, 2019ರ ಮಾರ್ಚ್ ವೇಳೆಗೆ ಕೆಲಸವನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಶಿವರಾಮಕಾರಂತ ಬಡಾವಣೆಯಲ್ಲಿ ಮೂರು ತಿಂಗಳೊಳಗಾಗಿ ನಿವೇಶನ ಹಂಚಿಕೆ ಮಾಡುವಂತೆ ಹೈಕೋರ್ಟ್ ಸೂಚಿಸಿದೆ. ಅದರಂತೆ ಬಿಡಿಎ ಕ್ರಮಕೈಗೊಂಡಿದ್ದು, ಒಟ್ಟು 3546 ಎಕರೆ ಭೂಮಿಯ ಪೈಕಿ ಬಿಡಿಎಗೆ 800 ಎಕರೆ ಮಾತ್ರ ಹಸ್ತಾಂತರವಾಗಿದೆ. ಉಳಿದ ಭೂಮಿ ಹಸ್ತಾಂತರ ಮಾಡಿಕೊಳ್ಳಬೇಕು. ಈಗಿನ ಪದ್ಧತಿಯಂತೆ ಪರಿಹಾರ ನೀಡಲು ಸುಮಾರು 7 ರಿಂದ 8 ಸಾವಿರ ಕೋಟಿ ರೂ. ಅಗತ್ಯವಿದೆ. ಅಷ್ಟು ಭೂಮಿಯಲ್ಲಿ ಸುಮಾರು 30 ಸಾವಿರ ನಿವೇಶನ ನಿರ್ಮಿಸಲು ಸಾಧ್ಯ. ಇಂದಿನ ಸಭೆಯಲ್ಲಿ ಶಿವರಾಮಕಾರಂತ ಬಡಾವಣೆ ಬಗ್ಗೆ ಸಮಗ್ರ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ತೀವ್ರ ವಿವಾದಕ್ಕೆ ಗುರಿಯಾಗಿರುವ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಮಾಡುವುದು ಶತಸಿದ್ಧ ಎಂದು ಪರಮೇಶ್ವರ್ ಹೇಳಿದರು.
ಭೂಸ್ವಾಧೀನ ಕಾರ್ಯಕ್ಕೆ ಸುಮಾರು 8100 ಕೋಟಿ, ಬಡಾವಣೆ ನಿರ್ಮಾಣಕ್ಕಾಗಿ 6 ಸಾವಿರ ಕೋಟಿ ಸೇರಿ ಸುಮಾರು 16 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. 65 ಕಿ.ಮೀ. ಉದ್ದದ 8 ಪಥದ ಈ ರಸ್ತೆ ಸರ್ವೀಸ್ ರಸ್ತೆಗಳನ್ನು ಒಳಗೊಂಡಿರುತ್ತದೆ. ಮೆಟ್ರೋ ಮಾರ್ಗಕ್ಕಾಗಿ ರಸ್ತೆ ಮಧ್ಯೆ ಸ್ಥಳಾವಕಾಶ ಕಲ್ಪಿಸಲಾಗುವುದು. ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಬೇಕೇ, ಅಥವಾ ಯಾವ ಮಾದರಿಯನ್ನು ಅನುಸರಿಸಬೇಕು ಎಂಬುದನ್ನು ಚರ್ಚಿಸಿ ನಿರ್ಣಯ ಕೈಗೊಳ್ಳುವುದಾಗಿ ಹೇಳಿದರು.
ಬಿಡಿಎ ಈವರೆಗೂ ನಿರ್ಮಿಸಿರುವ ಎಲ್ಲ ಅಪಾರ್ಟ್ಮೆಂಟ್ಗಳು ಮಾರಾಟಗೊಂಡಿವೆ. ಒಂದು ಅಪಾರ್ಟ್ಮೆಂಟ್ನಲ್ಲಿ ಮಾತ್ರ ಕೆಲವು ಫ್ಲ್ಯಾಟ್ಗಳು ಉಳಿದಿವೆ. ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಮಾತ್ರ ಅಪಾರ್ಟ್ಮೆಂಟ್ ನಿರ್ಮಿಸಲಾಗುವುದು, ಇಲ್ಲವಾದರೆ ಇಲ್ಲ ಎಂದು ಹೇಳಿದರು.
ಕೆಂಪೇಗೌಡ ಬಡಾವಣೆಯಲ್ಲಿ 5 ಸಾವಿರ ನಿವೇಶನಗಳ ಹಂಚಿಕೆ ಮಾಡಲು ಈಗಾಗಲೇ ಲಾಟರಿ ಪ್ರಕ್ರಿಯೆ ಪೂರ್ಣಗೊಳಿಸಿದ್ದು, 4971 ಫಳಾನುಭವಿಗಳನ್ನು ಆಯ್ಕೆ ಮಾಡಿ ದಾಖಲೆಗಳನ್ನು ನೀಡಲಾಗಿದೆ. ಬಡ್ಡಿ ರಹಿತವಾಗಿ ಹಣ ಕಟ್ಟಲು ಮೂರು ತಿಂಗಳ ಕಾಲಾವಕಾಶ ನೀಡಲಾಗಿತ್ತು, ಅದನ್ನು ನಾಲ್ಕು ತಿಂಗಳಿಗೆ ವಿಸ್ತರಿಸಬೇಕೆಂಬ ಬೇಡಿಕೆ ಇದೆ. ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ನಿರ್ಣಯಕೈಗೊಳ್ಳಲಾಗುವುದು. ದಂಡ ರಹಿತವಾಗಿ 4 ತಿಂಗಳು ಕೊಟ್ಟರೆ ಶೇ.18ರಷ್ಟು ದಂಡ ಸಹಿತವಾಗಿ ಇನ್ನೂ ಒಂದು ತಿಂಗಳು ಹೆಚ್ಚುವರಿ ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.
ಬೆಂಗಳೂರಿನ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಡಿಎ 2020-50ರ ವಿಷನ್ ಬೆಂಗಳೂರು ಯೋಜನೆಯನ್ನು ರೂಪಿಸುತ್ತಿದೆ. ಇದರ ಪ್ರಕಾರ ಬೆಂಗಳೂರಿನ ಸುತ್ತಮುತ್ತಲಿರುವ ರಾಮನಗರ, ಆನೇಕಲ್, ದೊಡ್ಡಬಳ್ಳಾಪುರ, ಹೊಸಕೋಟೆ, ದಾಬಸ್ಪೇಟೆ ನಗರಗಳನ್ನು ಉಪನಗರಗಳನ್ನಾಗಿ ಅಭಿವೃದ್ಧಿ ಪಡಿಸುವುದು, ಆ ಮೂಲಕ ಬೆಂಗಳೂರಿನ ಮೇಲೆ ಉಂಟಾಗುತ್ತಿರುವ ಸಂಚಾರ ದಟ್ಟಣೆ ಸೇರಿದಂತೆ ಹಲವಾರು ಒತ್ತಡಗಳನ್ನು ಕಡಿಮೆ ಮಾಡುವ ಚಿಂತನೆ ಇದೆ ಎಂದು ಹೇಳಿದರು.
ಜೊತೆಗೆ ಬೆಂಗಳೂರಿನ ಅಭಿವೃದ್ಧಿಗೆ ಈಗಾಗಲೇ ರೂಪಿಸಲಾಗಿರುವ 2031 ಮಾಸ್ಟರ್ಪ್ಲ್ಯಾನ್ ಸಾರ್ವಜನಿಕರ ಅವಗಾಹನೆಗೆ ತರಲಾಗಿತ್ತು. 14 ಸಾವಿರ ಮಂದಿ ಆಕ್ಷೇಪಣೆ ಸಲ್ಲಿಸಿದ್ದರು. ಹಾಗಾಗಿ ಅದನ್ನು ಪುನರ್ ಪರಿಶೀಲಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.