ಬೆಂಗಳೂರು,ನ.3- ಕರ್ನಾಟಕ ಹೈಕೋರ್ಟ್‍ನ ನ್ಯಾಯಾಧೀಶರಾಗಿ 7 ಮಂದಿ , ಹೆಚ್ಚುವರಿ ನ್ಯಾಯಾಧೀಶರಾಗಿ ಐದು ಮಂದಿ ನ್ಯಾಯಮೂರ್ತಿಗಳು ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದ ಕೆಂಪಯ್ಯ ಸೋಮಶೇಖರ್, ಕೊಟ್ರವ್ವ ಸೋಮಪ್ಪ ಮುದಗಲ್, ಶ್ರೀನಿವಾಸ್ ಹರೀಶ್‍ಕುಮಾರ್, ಜಾನ್ ಮೈಕಲ್ ಕುನ್ಹಾ, ಬಸವರಾಜ್ ಅಂದಾನಗೌಡ ಪಾಟೀಲ್, ನಂಗಲಿ ಕೃಷ್ಣರಾವ್ ಸುಧೀರಂದ್ರ ರಾವ್ ಮತ್ತು ಹೊಸೂರ್ ಭುಜಂಗರಾಯ ಪ್ರಭಾಕರ್ ಶಾಸ್ತ್ರಿ ಅವರನ್ನೊಳಗೊಂಡಂತೆ ಏಳು ಮಂದಿ ನ್ಯಾಯಮೂರ್ತಿಗಳು ರಾಜ್ಯ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಅಶೋಕ್‍ಗೋಲಪ್ಪ ನಿಜಗಣ್ಣನವರ್, ಹೇತೂರ್ ಪುಟ್ಟಸ್ವಾಮಿ ಗೌಡ ಸಂದೇಶ್, ಪ್ರಹ್ಲಾದರಾವ್ ಗೋವಿಂದರಾವ್ ಮುತಾಲಿಕ್ ಪಾಟೀಲ್, ಕೃಷ್ಣನ್ ನಟರಾಜನ್, ಅಪ್ಪ ಸಾಹೇಬ್ ಶಾಂತಪ್ಪ ಬೆಳ್ಳುಂಕೆ ಸೇರಿದಂತೆ ಐದು ಮಂದಿ ನ್ಯಾಯಮೂರ್ತಿಗಳು ಹೈಕೋರ್ಟ್‍ನ ಹೆಚ್ಚುವರಿ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದರು.
ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ನೂತನ ನ್ಯಾಯಮೂರ್ತಿಗಳಿಗೆ ರಾಜ್ಯಪಾಲ ವಜೂಭಾಯಿ ವಾಲಾ ಅವರು ಅಧಿಕಾರ ಪ್ರಮಾಣ ವಚನ ಬೋಧಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೆರೇಗೌಡ,ಕರ್ನಾಟಕ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಸೇರಿದಂತೆ ರಾಜ್ಯ ಹೈಕೋರ್ಟ್‍ನ ನ್ಯಾಯಮೂರ್ತಿಗಳು, ವಿವಿಧ ಅಧೀನ ನ್ಯಾಯಾಲಯಗಳ ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು, ಹಿರಿಯ ವಕೀಲರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು ರಾಷ್ಟ್ರಪತಿ ಭವನದಿಂದ ಸ್ವೀಕೃತವಾದ ನೇಮಕಾತಿ ಆದೇಶವನ್ನು ವಾಚಿಸಿದರು.