ಬೆಂಗಳೂರು, ನ.3- ಕೆರೆಗಳು ಕಲುಷಿತಗೊಂಡಿವೆ, ನಗರದ ರಸ್ತೆಗಳು ಧೂಳು ಮಯವಾಗಿವೆ, ಮದ್ರಾಸ್ ಐ ರೋಗ ಮಾದರಿಯಲ್ಲಿ ಬೆಂಗಳೂರು ಐ ರೋಗ ಆವರಿಸಿಕೊಳ್ಳತೊಡಗಿದೆ. ಮಿತಿಮೀರಿದ ಮಾಲಿನ್ಯದಿಂದ ಬೆಂಗಳೂರು ದೆಹಲಿಯಂತಾಗುತ್ತಿದೆ.
ಪಟಾಕಿಗಳನ್ನು ಕಡಿಮೆ ಮಾಡಿ ಮಾಲಿನ್ಯವನ್ನು ನಿಯಂತ್ರಿಸಿ. ರಸ್ತೆ ಗುಂಡಿಗಳು, ರಾಜಕಾಲುವೆಗಳು, ಕಲುಶಿತಗೊಂಡ ಕೆರೆಗಳು, ಮಿತಿಮೀರಿದ ವಾಹನಗಳಿಂದ ಹೊರಸೂಸುವ ಕಾರ್ಬನ್ ಮೋನಾಕ್ಸೈಡ್ನಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ವಾಯುಮಾಲಿನ್ಯ ನಿಯಂತ್ರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರಿಗೆ ಇಲಾಖೆ ಎರಡು ವರ್ಷಗಳ ಕಾಲ ಯಾವುದೇ ವಾಹನಗಳನ್ನು ನೋಂದಣಿ ಮಾಡಿಸಬಾರದು ಎಂಬ ನಿರ್ಧಾರಕ್ಕೆ ಬರಲು ಮುಂದಾಗಿದೆ.
ಇಂತಹ ಸಂದರ್ಭದಲ್ಲಿ ದೀಪಾವಳಿ ಹಬ್ಬ ಬಂದಿದ್ದು, ಬೆಂಗಳೂರಿನ ನಾಗರಿಕರು ಸಂಪ್ರದಾಯದಂತೆ ಸಡಗರ-ಸಂಭ್ರಮದಿಂದ ಆಚರಿಸುವುದು ಸೂಕ್ತ. ಪಟಾಕಿ ಸಿಡಿಸಿ, ಸಿಡಿಮದ್ದುಗಳನ್ನು ಸ್ಫೋಟಿಸಿ ಪರಿಸರವನ್ನು ಮತ್ತಷ್ಟು ಹಾಳುಗೆಡಹುವುದು ಬೇಡ. ಮೆಟ್ರೋ ರೈಲು ಮೇಲ್ಸೇತುವೆಗಳ ನಿರ್ಮಾಣ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಈಗಾಗಲೇ ಬೆಂಗಳೂರು ಮಹಾನಗರದಲ್ಲಿ ಸಾವಿರಾರು ಮರಗಳ ಮಾರಣಹೋಮವಾಗಿದೆ. ಪರಿಸರ ಮಾಲಿನ್ಯವನ್ನು ತಡೆಯುವ ಶಕ್ತಿ ಇಲ್ಲದಂತಾಗಿದೆ. ಮಾನವ ಸೃಷ್ಟಿಸುವ ಮಾಲಿನ್ಯವನ್ನು ನಿಯಂತ್ರಿಸದಿದ್ದರೆ ಅನಗತ್ಯವಾಗಿ ಅನಾರೋಗ್ಯಕ್ಕೀಡಾಗಿ ಎಲ್ಲರೂ ಪರಿತರಪಿಸಬೇಕಾಗುತ್ತದೆ. ಇದಕ್ಕೆ ಪಟಾಕಿಗಳು ಹೊರತಾಗಿಲ್ಲ. ಆದಷ್ಟು ಅಪಾಯ ರಹಿತ, ಮಾಲಿನ್ಯ ರಹಿತ ಪಟಾಕಿಗಳನ್ನು ಸಿಡಿಸುವುದು ಸೂಕ್ತ. ಈಗಾಗಲೇ ಸರ್ಕಾರ, ಸಂಘ-ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು ಈ ಬಗ್ಗೆ ಜಾಗೃತಿ ಮೂಡಿಸಿವೆ.
ಸುಪ್ರೀಂಕೋರ್ಟ್ ಕೂಡ ಪಟಾಕಿ ಹೊಡೆಯಲು ಸಮಯ ನಿಗದಿ ಮಾಡಿದೆ. ರಾಜ್ಯ ಸರ್ಕಾರ ಕೂಡ ಪಟಾಕಿ ನಿಷೇಧಿಸಿ ಸುತ್ತೋಲೆ ಹೊರಡಿಸಿದೆ. ಯಾರು ಏನು ಮಾಡಿದರೇನು ಜನ ಜಾಗೃತರಾಗಬೇಕು. ನಮ್ಮ ಪರಿಸರವನ್ನು ನಾವು ಕಾಪಾಡಿಕೊಳ್ಳಬೇಕೆಂಬ ಅರಿವು ನಮಗೆ ಬರಬೇಕು. ಅದಕ್ಕಾಗಿಯೇ ಪರಿಸರವನ್ನು ಹಾಳು ಮಾಡುವಂತಹ ಪಟಾಕಿಗಳನ್ನು ಸಿಡಿಸುವುದು ಬೇಡ. ಹಬ್ಬ ಆಚರಣೆಗೆ ನಮ್ಮ ಆಕ್ಷೇಪವಿಲ್ಲ. ಆದರೆ, ಪರಿಸರ ಹಾಳಾಗದಂತೆ ಹಬ್ಬವನ್ನು ಆಚರಿಸುವುದು ಸೂಕ್ತ ಎಂಬುದು ನಮ್ಮ ಆಶಯ.
ಪಟಾಕಿ ಸಿಡಿಸುವುದರಿಂದ ಅಪಾಯಗಳು ಕೂಡ ಹೆಚ್ಚಾಗಿವೆ. ಮೈ-ಕೈ ಸುಟ್ಟುಕೊಳ್ಳುವುದರ ಜತೆಗೆ ಕಣ್ಣು ಕಳೆದುಕೊಳ್ಳುವವರೂ ಕೂಡ ಪ್ರತಿವರ್ಷ ಹೆಚ್ಚಾಗುತ್ತಿದ್ದಾರೆ.
ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಅಪಾಯಗಳು ತಪ್ಪುವುದಿಲ್ಲ. ಪಟಾಕಿಗಳನ್ನು ಸಿಡಿಸದೆ, ಪರಿಸರ ಹದಗೆಡದಂತೆ ಕಾಪಾಡಿ.