ಬೆಂಗಳೂರು,ನ.3- ಇಂದು ನಡೆದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕರು ಮತದಾನದಿಂದ ವಂಚಿತರಾಗಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರ ಮತ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕೇತಮಾರನಹಳ್ಳಿ ವ್ಯಾಪ್ತಿಗೆ ಬರುತ್ತದೆ.
ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅನಿತಾಕುಮಾರಸ್ವಾಮಿ ಸ್ಪರ್ಧಿಸಿದ್ದರೂ ಅವರಿಗೆ ಮತ ಚಲಾಯಿಸುವ ಅಧಿಕಾರ ಇರಲಿಲ್ಲ.
ಇನ್ನು ಬಿಜೆಪಿಯಿಂದ ಸ್ಪರ್ಧಿಸಿ ಎರಡು ದಿನಗಳ ಹಿಂದಷ್ಟೇ ಕಣದಿಂದ ನಿವೃತ್ತಿಯಾದ ಎಲ್.ಚಂದ್ರಶೇಖರ್ ಕೂಡ ಮತದಾನದ ಹಕ್ಕು ಹೊಂದಿರಲಿಲ್ಲ.
ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿ.ಎಸ್.ಉಗ್ರಪ್ಪ ಕೂಡ ಮತದಾನದ ಅವಕಾಶದಿಂದ ವಂಚಿತರಾಗಿದ್ದರು.
ಮೂಲತಃ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನವರಾಗಿದ್ದರೂ ಉಗ್ರಪ್ಪ ಬೆಂಗಳೂರಿನಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ. ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಕೂಡ ಮತದಾನ ಮಾಡಿಲ್ಲ. ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಿಲುಕಿರುವ ಅವರು ಬಳ್ಳಾರಿಗೆ ಕಾಲಿಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸೂಚನೆ ಕೊಟ್ಟಿದೆ. ಹೀಗಾಗಿ ಕಳೆದ ಹಲವು ಚುನಾವಣೆಗಳಿಂದ ರೆಡ್ಡಿ ಮತದಾನದಿಂದ ವಂಚಿತರಾಗಿದ್ದಾರೆ.