ಬೆಂಗಳೂರು, ನ.3- ಕಲುಷಿತ ವಾತಾವರಣ ಮತ್ತು ಹವಾಮಾನ ವೈಪರೀತ್ಯದಿಂದ ನಗರದಲ್ಲಿ ಹೆಚ್1ಎನ್1 ರೋಗ ಉಲ್ಬಣಗೊಂಡಿರುವುದರ ಜತೆಗೆ ಇದೀಗ ಶ್ವಾಸಕೋಶ ಸಂಬಂಧಿ ಸೋಂಕುಗಳು ಕಾಣಿಸಿಕೊಳ್ಳತೊಡಗಿವೆ.
ಇದ್ದಕ್ಕಿದ್ದಂತೆ ಜ್ವರ ಕಾಣಿಸಿಕೊಳ್ಳುವುದರ ಜತೆಗೆ ಕೆಮ್ಮು, ಕಫ ಹೆಚ್ಚಾಗುತ್ತಿದ್ದು ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ದಿನೇ ದಿನೇ ದ್ವಿಗುಣಗೊಳ್ಳುತ್ತಿದೆ.
ಜ್ವರ ಕಾಣಿಸಿಕೊಂಡ ಕೂಡಲೇ ಹೆಚ್1ಎನ್1 ರೋಗ ತಗುಲಿರಬಹುದು ಎಂಬ ಶಂಕೆಯಿಂದ ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ರೋಗಿಗಳು ದಾಖಲಾಗುತ್ತಿದ್ದಾರೆ.
ಆಸ್ಪತ್ರೆಗೆ ದಾಖಲಾದ ಕೆಲವರಲ್ಲಿ ಮಾತ್ರ ಹೆಚ್1ಎನ್1 ವೈರಾಣು ಕಂಡುಬಂದಿದ್ದು, ಉಳಿದ ರೋಗಿಗಳಿಗೆ ಶ್ವಾಸಕೋಶ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ನಗರದಲ್ಲಿರುವ ಪ್ರತಿ 10 ಮನುಷ್ಯರಲ್ಲಿ 6 ಮಂದಿಗೆ ಗಂಟಲು ನೋವು, ಜ್ವರ, ಶೀತ, ನೆಗಡಿ, ಕೆಮ್ಮು, ಕಫ, ಆಸ್ತಮಾದಂತಹ ಸೋಂಕು ತಗುಲುತ್ತಿರುವುದು ಸರ್ವೆ ಸಾಮಾನ್ಯವಾಗಿದೆ.
ಜ್ವರ, ಕೆಮ್ಮು ಸಾಮಾನ್ಯ ಎಂದು ಮೈಮರೆತರೆ ಅದು ಮಾರಣಾಂತಿಕವಾಗುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಯಾವುದೇ ರೋಗ ಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಬೌರಿಂಗ್, ವಿಕ್ಟೋರಿಯಾ, ಕೆಸಿ ಜನರಲ್ ಮತ್ತಿತರ ಸರ್ಕಾರಿ ಆಸ್ಪತ್ರೆಗಳಿಗೆ ಪ್ರತಿನಿತ್ಯ ನೂರಾರು ರೋಗಿಗಳು ದಾಖಲಾಗುತ್ತಿದ್ದು, ಇವರಲ್ಲಿ ಶೇ.25ರಷ್ಟು ಮಂದಿಗೆ ಶ್ವಾಸಕೋಶ ಸೋಂಕು ಕಾಣಿಸಿಕೊಂಡಿರುವುದು ಪತ್ತೆಯಾಗಿದೆ.
ಅದೇ ರೀತಿ ಖಾಸಗಿ ಆಸ್ಪತ್ರೆಗಳಿಗೂ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದ್ದು, ಕೆಲವರಲ್ಲಿ ಹೆಚ್1ಎನ್1 ರೋಗ ಲಕ್ಷಣ ಕಂಡುಬಂದರೆ ಬಹುತೇಕ ಮಂದಿ ಶೀತ, ಜ್ವರ, ಕೆಮ್ಮಿನಿಂದ ಬಳಲುತ್ತಿರುವುದಾಗಿ ವರದಿಯಾಗಿದೆ.
ಕಲುಷಿತ ವಾತಾವರಣ, ಸ್ವಚ್ಛತೆ ಇಲ್ಲದ ಜೀವನದಿಂದಾಗಿ ಪ್ರತಿವರ್ಷ ಒಂದಲ್ಲ ಒಂದು ಹೊಸ ಕಾಯಿಲೆಗಳು ಹುಟ್ಟಿಕೊಳ್ಳುತ್ತಲೇ ಇವೆ. ಡೆಂಘೀ, ಚಿಕೂನ್ ಗುನ್ಯಾ, ಹೆಚ್1ಎನ್1 ಕಾಣಿಸಿಕೊಂಡ ಬೆನ್ನಲ್ಲೇ ಇದೀಗ ಶ್ವಾಸಕೋಶ ಸೋಂಕು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಹೀಗಾಗಿ ಸಾರ್ವಜನಿಕರು ಸೊಳ್ಳೆ ಉತ್ಪಾದನೆ ಹೆಚ್ಚಾಗದಂತೆ ಎಚ್ಚರ ವಹಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ರೋಗ ತಗುಲದಂತೆ ನೋಡಿಕೊಳ್ಳುವ ಅಗತ್ಯವಿದೆ ಎಂಬುದು ವೈದ್ಯರ ಸಲಹೆಯಾಗಿದೆ.
ಕಾರಣವೇನು? ಇದ್ದಕ್ಕಿದ್ದಂತೆ ಹವಾಮಾನದಲ್ಲಿ ಏರಿಳಿತವಾಗುವುದೇ ರೋಗ-ರುಜಿನಗಳು ಹೆಚ್ಚಾಗಲು ಕಾರಣವಾಗಿದೆ. ಹೀಗಾಗಿ ಶುಚಿಯಾದ ಬಿಸಿ ಬಿಸಿ ಊಟ ಮಾಡುವುದರ ಕಡೆ ಗಮನ ಹರಿಸಬೇಕು. ಬೆಳಗಿನ ಹಾಗೂ ಸಂಜೆಯ ಥಂಡಿ ವಾತಾವರಣದಲ್ಲಿ ಮನೆಯಿಂದ ಹೊರ ಹೋಗುವುದು ಸೂಕ್ತವಲ್ಲ. ಅದರಲ್ಲೂ ಮಕ್ಕಳು ಮತ್ತು ಹಿರಿಯರ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅವಶ್ಯಕತೆಯಿದೆ. ಥಂಡಿ ವಾತಾವರಣದಲ್ಲಿ ಹೊರಹೋಗಲೇಬೇಕಾದ ಪರಿಸ್ಥಿತಿ ಎದುರಾದಾಗ ಬೆಚ್ಚನೆಯ ಉಡುಪುಗಳನ್ನು ಧರಿಸುವುದು ಸೂಕ್ತ.
ಒಂದು ಸಾವಿರ ಮಂದಿಗೆ ಹೆಚ್1ಎನ್1: ಜನರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಹೆಚ್1ಎನ್1 ಕೇವಲ ನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದೆಲ್ಲೆಡೆ ಈ ಮಾರಣಾಂತಿಕ ರೋಗ ಹಾವಳಿ ಇಟ್ಟಿದ್ದು, ಇದುವರೆಗೂ ಒಂದು ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಹೆಚ್1ಎನ್1 ರೋಗ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇದುವರೆಗೂ 20ಕ್ಕೂ ಹೆಚ್ಚು ಮಂದಿ ಹೆಚ್1ಎನ್1ಗೆ ಬಲಿಯಾಗಿದ್ದಾರೆ ಎನ್ನಲಾಗಿದೆ.
ಮುನ್ನೆಚ್ಚರಿಕೆ ಕ್ರಮ: ಸ್ಥಳೀಯ ಪಾಲಿಕೆಗಳು ಹಾಗೂ ಆರೋಗ್ಯ ಇಲಾಖೆ ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗಗಳಿಗೆ ಕಡಿವಾಣ ಹಾಕಲು ಎಲ್ಲ ರೀತಿಯ ಕ್ರಮ ಕೈಗೊಂಡಿವೆ.
ಹೆಚ್1ಎನ್1 ರೋಗ ಲಕ್ಷಣಗಳು ಇತ್ತೀಚೆಗೆ ಕಡಿಮೆಯಾಗುತ್ತಿವೆ ಎನ್ನುವುದು ಆರೋಗ್ಯ ಇಲಾಖೆ ಅಧಿಕಾರಿಗಳ ಅಂಬೋಣವಾಗಿದೆ.