ಬೆಂಗಳೂರು,ನ.3 – ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು ನಡೆದ ಮತದಾನದಲ್ಲಿ ಪ್ರಮುಖ ಪಕ್ಷಗಳ ಮುಖಂಡರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ವಿಧಾನಸಭೆಯ ಪ್ರತಿಪಕ್ಷದ ನಾಯಕ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ತವರು ಕ್ಷೇತ್ರ ಶಿಕಾರಿಪುರದಲ್ಲಿ ಕುಟುಂಬ ಸಮೇತ ಹಕ್ಕು ಚಲಾಯಿಸಿದರು.
ಇದಕ್ಕೂ ಮುನ್ನ ಬೆಳಗ್ಗೆ ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಪುತ್ರರಾದ ರಾಘವೇಂದ್ರ, ವಿಜಯೇಂದ್ರ ಹಾಗೂ ಸೊಸೆಯರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಮತಗಟ್ಟ ಸಂಖ್ಯೆ 132ರಲ್ಲಿ ಸರತಿಯಲ್ಲಿ ನಿಂತು ಮತದಾನ ಮಾಡಿದರು.
ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪನವರ ಪುತ್ರ ಮಧುಬಂಗಾರಪ್ಪ ತಮ್ಮ ಹುಟ್ಟೂರು ಸೊರಬ ತಾಲ್ಲೂಕಿನ ಕುಬಟೂರಿನಲ್ಲಿ ಮತ ಚಲಾಯಿಸಿದ್ದಾರೆ.
ಮತದಾನಕ್ಕೂ ಮುನ್ನ ಮಧುಬಂಗಾರಪ್ಪ ತಮ್ಮ ತಂದೆತಾಯಿ ಭಾವಚಿತ್ರಕ್ಕೆ ನಮನ ಸಲ್ಲಿಸಿ ನಂತರ ಕುಟುಂಬ ಸಮೇತ ಹಕ್ಕು ಚಲಾಯಿಸಿದರು.
ಶಿವಮೊಗ್ಗದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ , ವಿಧಾನಪರಿಷತ್ನ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಕುಟುಂಬ ಸಮೇತ ತಮ್ಮ ತಮ್ಮ ಮತಗಟ್ಟೆಗಳಲ್ಲಿ ಹಕ್ಕು ಚಲಾಯಿಸಿದರು.
ಇದೇ ರೀತಿ ಕುಮಾರ್ ಬಂಗಾರಪ್ಪ, ಹರತಾಳ್ ಹಾಲಪ್ಪ , ಅರಗ ಜ್ಞಾನೇಂದ್ರ, ಅಶೋಕ್ ನಾಯಕ್, ಬಿ.ಪಿ.ಸಂಗಮೇಶ್ ಸೇರಿದಂತೆ ಅನೇಕರು ತಮ್ಮ ತಮ್ಮ ಕುಟುಂಬದವರೊಂದಿಗೆ ಆಗಮಿಸಿ ಮತದಾನ ಮಾಡಿ ನಂತರ ಗೆಲುವಿನ ಸಂಕತೇನವನ್ನು ಮತದಾರರಿಗೆ ಪ್ರದರ್ಶಿಸಿದರು.
ಹೈವೋಲ್ಟೇಜ್ ಕ್ಷೇತ್ರವಾಗಿರುವ ಗಣಿ ಜಿಲ್ಲೆ ಬಳ್ಳಾರಿಯಲ್ಲೂ ಬಿಜೆಪಿ ಅಭ್ಯರ್ಥಿ ಜೆ.ಶಾಂತ ಕೋಟೆ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿ ಮತದಾನ ಮಾಡಿದರು.
ಸಹೋದರ ಶ್ರೀರಾಮುಲು ಕೂಡ ಗೋ ಮಾತೆಗೆ ಪೂಜೆ ಸಲ್ಲಿಸಿ ನಂತರ ಸರದಿಯಲ್ಲಿ ನಿಂತು ಮತ ಹಾಕಿದರು. ಶಾಸಕರಾದ ಆನಂದ್ ಸಿಂಗ್, ನಾಗೇಂದ್ರ, ಭೀಮಾನಾಯಕ್, ಗಣೇಶ್, ತುಕಾರಾಂ, ಪರಮೇಶ್ವರ್ ನಾಯಕ್ ಸೇರಿದಂತೆ ಮತ್ತಿತರರು ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಮತ ಚಲಾಯಿಸಿದರು.
ಜಮಖಂಡಿಯಲ್ಲಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮೇಗೌಡ ಬೂತ್ ಸಂಖ್ಯೆ 125ರಲ್ಲಿ ಮತ ಚಲಾಯಿಸಿದ್ದಾರೆ. ಮತ ಚಲಾವಣೆಗೂ ಮುನ್ನ ತಮ್ಮ ತಂದೆ ಸಿದ್ದು ನ್ಯಾಮೇಗೌಡರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು.
ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ಕುಲಕರ್ಣಿ ಹಿರೇಪಡಸಲಗಿಯಲ್ಲಿ ಮತ ಚಲಾಯಿಸಿದ್ದಾರೆ.
ಸಕ್ಕರೆ ಜಿಲ್ಲೆ ಮಂಡ್ಯದಲ್ಲೂ ವಿವಿಧ ಪಕ್ಷಗಳ ಮುಖಂಡರು ಮತ ಚಲಾಯಿಸಿದರು. ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಅವರು ಯತ್ತಗದಹಳ್ಳಿಯಲ್ಲಿ ಮತದಾನ ಮಾಡಿದರು. ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ , ಶಾಸಕರಾದ ನಾರಾಯಣಗೌಡ, ಡಾ.ಅನ್ನದಾನಿ, ರಮೇಶ್ ಬಂಡಿ ಸಿದ್ದೇಗೌಡ, ಶ್ರೀನಿವಾಸ್ ಮತ್ತಿತರರು ಕ್ಷೇತ್ರ ವ್ಯಾಪಿ ಬೆಳಗ್ಗೆಯೇ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ದೃಶ್ಯ ಕಂಡುಬಂತು.
ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಅನಿಕುಮಾರ ಸ್ವಾಮಿ ಅವರು ಮತದಾನದ ಹಕ್ಕು ಹೊಂದಿರಲಿಲ್ಲ. ಆದರೆ ಬೆಳಗ್ಗೆ ಅವರು ಕೋತಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದರು.