
ಬೆಂಗಳೂರು,ನ.3- ಪಕ್ಷದ ನಾಯಕರ ಬೆಳವಣಿಗೆಯಿಂದ ಬೇಸತ್ತಿರುವ ರಾಮನಗರ ಜಿಲ್ಲೆ ಬಿಜೆಪಿ ಅಧ್ಯಕ್ಷ ಎಂ.ರುದ್ರೇಶ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ನಾಳೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಲಿರುವ ರುದ್ರೇಶ್ ಬಿಜೆಪಿಗೆ ವಿದ್ಯುಕ್ತವಾಗಿ ಗುಡ್ ಬೈ ಹೇಳಲಿದ್ದಾರೆ ಎಂದು ತಿಳಿದುಬಂದಿದೆ.
ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಲ್.ಚಂದ್ರಶೇಖರ್ ಎರಡು ದಿನಗಳ ಹಿಂದೆಯಷ್ಟೇ ಚುನಾವಣಾ ಕಣದಿಂದ ಹಿಂದೆ ಸರಿದು ನಿವೃತ್ತಿ ಘೋಷಿಸಿದ್ದರು. ಈ ಬೆಳವಣಿಗೆಗೆ ಪಕ್ಷದ ಕೆಲವು ನಾಯಕರ ವರ್ತನೆಗಳೇ ಕಾರಣ ಎಂಬುದು ರುದ್ರೇಶ್ ಆರೋಪವಾಗಿದೆ.
ಪ್ರಮುಖವಾಗಿ ಮುಖಂಡರಾದ ಆರ್.ಅಶೋಕ್, ಸಿ.ಪಿ.ಯೋಗೇಶ್ವರ್ ಸೇರಿದಂತೆ ಎಲ್ಲ ಮುಖಂಡರು ಚಂದ್ರಶೇಖರ್ ಮನವೊಲಿಸುವಲ್ಲಿ ವಿಫಲರಾಗಿದ್ದು ಹಾಗೂ ಕ್ಷೇತ್ರದಲ್ಲಿ ಅಭ್ಯರ್ಥಿ ಪರ ಅಸಹಕಾರ ತೋರಿದ್ದರಿಂದ ನೊಂದು ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಪಕ್ಷದೊಳಗಿರುವ ಕೆಲವು ನಾಯಕರು ತಮ್ಮ ಸ್ವಾರ್ಥ ಸಾಧನೆಗಾಗಿ ಆಡಳಿತ ಪಕ್ಷದ ಪ್ರಮುಖರ ಜೊತೆ ಒಳ ಒಪ್ಪಂದ ಮಾಡಿಕೊಂಡು ಜಿಲ್ಲೆಯಲ್ಲಿ ಪಕ್ಷ ಬೆಳೆಯಲು ಅವಕಾಶ ನೀಡುತ್ತಿಲ್ಲ. ಚುನಾವಣಾ ಸಂದರ್ಭದಲ್ಲಿ ಕೆಲವರು ಒಪ್ಪಂದ ಮಾಡಿಕೊಂಡೇ ರಾಜಕಾರಣ ಮಾಡುತ್ತಿದ್ದಾರೆ. ಇದರಿಂದ ಸಂಘಟನೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಕ್ಷದಿಂದ ನಾನು ವಿಮುಖನಾಗುತ್ತಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ ವಿವರಿಸಲಿದ್ದಾರೆ .
ಈಗಾಗಲೇ ರಾಮನಗರದಲ್ಲಿ ಬಿಜೆಪಿ ಮೂರಾಬಟ್ಟೆಯಾಗಿರುವ ಸಂದರ್ಭದಲ್ಲಿ ಈಗ ರುದ್ರೇಶ್ ತೊರೆಯುತ್ತಿರುವುದು ಜಿಲ್ಲೆಯಲ್ಲಿ ಕಮಲ ಇನ್ನಷ್ಟು ಅಧೋಗತಿಗಿಳಿಯುವಂತಾಗಿದೆ.