ಉತ್ತಾನ್(ಮಹಾರಾಷ್ಟ್ರ):ಅಯೋಧ್ಯೆ ವಿಷಯ ತಮಗೆ ಆದ್ಯತೆಯ ವಿಷಯವಲ್ಲ ಎಂಬುದಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಶರು ಹೇಳಿರುವುದು ಹಿಂದುಗಳಲ್ಲಿ “ಅವಮಾನ”ದ ಭಾವವನ್ನು ಮೂಡಿಸಿದೆ . ಯಾಕೆಂದರೆ ಅತ್ಯಂತ ಸುದೀರ್ಘ ಕಾಲದಿಂದ ನ್ಯಾಯಕ್ಕಾಗಿ ಕಾದಿದ್ದ ಹಿಂದು ಸಮಾಜ ನ್ಯಾಯಾಲಯದ ಟಿಪ್ಪಣಿಯಿಂದ ಬೇಸರಗೊಂಡಿದೆ ಎಂಬುದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ಭಯ್ಯಾಜಿ ಜೋಶಿ ಶುಕ್ರವಾರ ಹೇಳಿದ್ದಾರೆ.ಯಾವುದೇ ಆಯ್ಕೆಗಳು ಇಲ್ಲ ಎಂಬಂತಹ ಸಂದರ್ಭ ಸರಕಾರ ಅಧ್ಯಾದೇಶವೊಂದನ್ನು ತರುವುದು ಅನಿವಾರ್ಯವಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.
ಇಲ್ಲಿ ನಡೆದ ,ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರು ದಿನಗಳ ಅಖಿಲ ಭಾರತೀಯ ಕಾರ್ಯಕಾರಿಣಿ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೋಶಿಯವರು, ಅಯೋಧ್ಯೆ ವಿಚಾರದಲ್ಲಿ ಅನಿವಾರ್ಯವಾದರೆ ಆಂದೋಲನವೊಂದನ್ನು ಹಮ್ಮಿಕೊಳ್ಳಲೂ ಸಂಘ ಸಿದ್ಧವಿದೆ . ಆದರೆ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ನಾವು ನ್ಯಾಯದ ನಿರೀಕ್ಷೆಯಲ್ಲಿದ್ದೇವೆ ಎಂದರು.
ಸಂಘ ಸರಕಾರದ ಮೇಲೆ ಈ ವಿಷಯದಲ್ಲಿ ಒತ್ತಡ ಹೇರುತ್ತಿಲ್ಲ. ನಾವು ಕಾನೂನು ಮತ್ತು ಸಂವಿಧಾನವನ್ನು ಗೌರವಿಸುತ್ತೇವೆ. ಆದರೆ ಈ ವಿಳಂಬ ಏಕಾಗುತ್ತಿದೆ ಎಂಬುದು ನಮ್ಮ ಕಳಕಳಿಯ ಪ್ರಶ್ನೆ .ಇಡಿ ದೇಶದ ಹಿಂದುಗಳ ಭಾವನೆ ಮತ್ತು ನಂಬಿಕೆಯ ವಿಷಯವಾಗಿರುವ ಅಯೋಧ್ಯೆ ವಿಷಯ ನಮಗೆ ಆದ್ಯತೆಯ ವಿಷಯವಲ್ಲ ಎಂಬ ನ್ಯಾಯಾಶರ ಟಿಪ್ಪಣಿ ಹಿಂದುಗಳಲ್ಲಿ ಅವಮಾನಿತ ಭಾವನೆಯನ್ನು ಸೃಷ್ಟಿಸಿದ್ದು, ನ್ಯಾಯಾಲಯ ಈಗಲಾದರೂ ಹಿಂದುಗಳ ಭಾವನೆಯನ್ನು ಪರಿಗಣಿಸಿ ತ್ವರಿತ ನ್ಯಾಯ ನೀಡಬೇಕೆಂದು ಜೋಶಿ ಆಗ್ರಹಿಸಿದರು.
ಇಲ್ಲಿಗೆ ಆಗಮಿಸಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸರಸಂಘಚಾಲಕ್ ಮೋಹನ್ ಭಾಗ್ವತ್ ಅವರನ್ನು ಶುಕ್ರವಾರ ಬೆಳಿಗ್ಗೆ ಭೇಟಿ ಮಾಡಿದ ಬಗ್ಗೆ ಕೇಳಿದಾಗ, ಈ ಸಂದರ್ಭ ಅಯೋಧ್ಯಾ ರಾಮ ಮಂದಿರ ಸೇರಿದಂತೆ ವಿವಿಧ ವಿಷಯಗಳು ಚರ್ಚೆಗೆ ಬಂದವು ಎಂದು ಜೋಶಿ ಪ್ರತಿಕ್ರಿಯಿಸಿದರು.
ನಾವು ಸರ್ವೋಚ್ಚ ನ್ಯಾಯಾಲಯವನ್ನು ಗೌರವಿಸುತ್ತೇವೆ. ಆದರೆ ನ್ಯಾಯಾಲಯ ಹಿಂದುಗಳ ಭಾವನೆಯನ್ನು ಪರಿಗಣಿಸಬೇಕೆಂಬುದು ನಮ್ಮ ಆಗ್ರಹವಾಗಿದೆ. ಸರಕಾರಕ್ಕೂ ಬೇರೆ ದಾರಿಯೇ ಇಲ್ಲವೆಂದಾದರೆ ಅಧ್ಯಾದೇಶ ಹೊರಡಿಸುವಂತಹ ಅನಿವಾರ್ಯ ಆಯ್ಕೆ ಸ್ವೀಕರಿಸಬೇಕಾಗಿ ಬರಬಹುದು. ಆದರೆ ಅದು ‘ಟೈಟಲ್ ಸೂಟ್’ ಆಗಿ ನ್ಯಾಯಾಲಯದಲ್ಲಿರುವುದರಿಂದ ಸರಕಾರಕ್ಕೂ ನಿರ್ಧಾರವೊಂದನ್ನು ತೆಗೆದುಕೊಳ್ಳಲು ಕಷ್ಟವಾಗಲಿದೆ ಎಂಬುದಾಗಿ ಅವರು ವಿವರಿಸಿದರು.
ಸುಪ್ರೀಂಕೋರ್ಟಿನ ತೀರ್ಪಿಗಾಗಿ ನಾವು ದೀರ್ಘಕಾಲದಿಂದ ಕಾಯುತ್ತಿದ್ದೇವೆ. ಅ. ೨೯ರಂದು ಅಯೋಧ್ಯೆ ವಿಷಯ ವಿಚಾರಣೆಗೆ ಬರುತ್ತದೆ ಎಂದಾದಾಗ ಹಿಂದುಗಳು ದೀಪಾವಳಿ ಒಳಗಡೆಯೇ ಶುಭ ಸುದ್ದಿಯೊಂದು ಲಭಿಸಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ ಸುಪ್ರೀಂಕೋರ್ಟ್ ಅದನ್ನು ಏಕಾಏಕಿಯಾಗಿ ೨೦೧೯ರ ಜನವರಿ ಪ್ರಥಮ ವಾರಕ್ಕೆ ಮುಂದೂಡಿತ್ತು. ಆಗ ಸಂಬಂಧಪಟ್ಟ ನ್ಯಾಯಪೀಠ ವಿಚಾರಣೆಯನ್ನು ಯಾವಾಗ ನಡೆಸಬಹುದೆಂಬುದನ್ನು ನಿರ್ಧರಿಸಲಿದೆ ಎಂದಿತ್ತು.ಮುಖ್ಯ ನ್ಯಾಯಾಶ ರಂಜನ್ ಗೊಗೋಯಿ ನೇತೃತ್ವದ ಮೂವರು ನ್ಯಾಯಾಶರ ಪೀಠ ಜನವರಿಯಲ್ಲಿ ಅಯೋಧ್ಯೆ ವಿವಾದ (ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ಮೇಲೆ )ದ ಮುಂದಿನ ವಿಚಾರಣೆಯ ಬಗ್ಗೆ ನಿರ್ಧರಿಸಲಿದೆ.
ರಾಮಲಲ್ಲಾ ಮತ್ತು ಉತ್ತರಪ್ರದೇಶ ಸರಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಎಸ್.ಸಿ.ವೈದ್ಯನಾಥನ್ ಅವರು ಈ ಬಗ್ಗೆ ಅಹವಾಲು ಮುಂದಿಟ್ಟು ಅಯೋಧ್ಯೆ ವಿವಾದಕ್ಕೆ ತ್ವರಿತವಾಗಿ ತೀರ್ಪು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಆಗ ಅಯೋಧ್ಯೆ ತಮಗೆ ಆದ್ಯತೆಯ ವಿಷಯವಲ್ಲ . ನಮಗೆ ನಮ್ಮದೇ ಆದ ಆದ್ಯತೆಗಳಿವೆ. ಅಯೋಧ್ಯೆ ವಿಚಾರದ ವಿಚಾರಣೆ ಜನವರಿಯಲ್ಲಿ, ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ …ಯಾವಾಗ ಎಂಬುದನ್ನು ಪೀಠ ನಿರ್ಧರಿಸಲಿದೆ ಎಂದು ನ್ಯಾಯಾಶರು ಹೇಳಿದ್ದರು.
ಇದು ದೇಶಾದ್ಯಂತ ಹಿಂದುಗಳಲ್ಲಿ ಆಘಾತ ಮೂಡಿಸಿತ್ತು. ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಷಯವನ್ನು ಲಿಂಗ ತಾರತಮ್ಯದ ಬಣ್ಣ ನೀಡಿ ತೀರ್ಪು ನೀಡಿದ್ದು, ಸಲಿಂಗ ಕಾಮ ಅಪರಾಧವಲ್ಲ ಎಂಬುದಾಗಿ ಹೇಳಿದ್ದು ಇತ್ಯಾದಿ ವಿಷಯಗಳಲ್ಲಿ ಆತುರ ತೋರಿದ್ದ ಸುಪ್ರೀಂಕೋರ್ಟ್ ನ್ಯಾಯಾಶರು ಅಯೋಧ್ಯೆ ವಿಷಯದಲ್ಲಿ ಇಂತಹ ಪ್ರತಿಕ್ರಿಯೆ ನೀಡಿದ್ದು ದೇಶಾದ್ಯಂತ ಈಗ ಚರ್ಚೆಗೆ ಈಡಾಗಿದೆ. ಅಯೋಧ್ಯಾ ವಿವಾದದ ಮೂಲ ಅರ್ಜಿದಾರರು ವಯೋವೃದ್ಧರಾಗಿ ಸಾವನ್ನಪ್ಪಿದ್ದು, ಹಲವು ದಶಕಗಳ ಬಳಿಕವೂ ನ್ಯಾಯಾಲಯಕ್ಕೆ ಹಿಂದುಗಳ ಪರಮ ಶ್ರದ್ಧೆಯ ಶ್ರೀರಾಮನ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಕುರಿತಂತೆ ನ್ಯಾಯ ನೀಡಲು ಸಾಧ್ಯವಾಗಿಲ್ಲ ಎಂಬ ನೋವು ಜನತೆಯಲ್ಲಿ ಮೂಡಲು ಕಾರಣವಾಗಿತ್ತು.
೨೦೧೦ರಲ್ಲಿ ಅಲಹಾಬಾದ್ ಹೈಕೋರ್ಟ್ ಅಯೋಧ್ಯೆ ಹಿಂದುಗಳಿಗೆ ಸೇರಿದ್ದೆಂಬ ಅಭಿಪ್ರಾಯ ನೀಡಿತ್ತು .ಆದಾಗ್ಯೂ ಅಯೋಧ್ಯೆಯ ವಿವಾದಿತ ೨.೭೭ಎಕರೆ ಜಾಗವನ್ನು ರಾಮಲಲ್ಲಾ, ನಿರ್ಮೋಹಿ ಅಖಾಡ, ಸುನ್ನಿ ವಕ್ ಬೋರ್ಡ್‌ಗೆ ಸಮಾನಾಗಿ ಹಂಚಿ ತೀರ್ಪು ನೀಡಿತ್ತು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂ ಆರೆಸ್ಸೆಸ್‌ನ ಹಿಂದುತ್ವವನ್ನು ಪ್ರಶ್ನಿಸುತ್ತಿರುವ ಬಗ್ಗೆ ಕೇಳಿದಾಗ , ಅವರನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ಪ್ರತಿಕ್ರಿಯಿಸಿದರು.
ಶಬರಿಮಲೆ ಕುರಿತಂತೆ ಕೇಳಿದಾಗ, ನಾವು ಮಹಿಳೆಯರಿಗೆ ಹಿಂದು ಧಾರ್ಮಿಕ ಸ್ಥಳಗಳಲ್ಲಿ ತಾರತಮ್ಯ ಮಾಡುವುದನ್ನು ಬೆಂಬಲಿಸುವುದಿಲ್ಲ . ಆದರೆ ಕೆಲವು ದೇವಾಲಯಗಳಲ್ಲಿ ಕೆಲವು ವಿನಿಷೇಧಗಳು ಇರುತ್ತವೆ.ಕೆಲವು ಜನರು ಇದು ತಮ್ಮ ಹಕ್ಕಿಗೆ ಧಕ್ಕೆ ಎಂದು ಭಾವಿಸಬಹುದು. ಆದರೆ ದೇವಾಲಯವೊಂದರ ನಿಯಮಗಳನ್ನು ಪರಿಗಣಿಸಿದಾಗ ಜನತೆಯ ನಂಬಿಕೆಯೇ ಪರಮೋಚ್ಚವಾಗುತ್ತದೆ.ಈ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ನಿರ್ದಿಷ್ಟ ವಯೋಮಾನದ ಮಹಿಳೆಯರಿಗೆ ನಿರ್ಬಂಧ ವಿಸುವ ಪರಂಪರೆಯನ್ನು ರಕ್ಷಿಸಬೇಕೆಂಬ ಭಕ್ತರ ಬೇಡಿಕೆಯನ್ನು ಆರೆಸ್ಸೆಸ್ ಬೆಂಬಲಿಸುತ್ತದೆ ಎಂದರು ಜೋಶಿ.
ಸಮಾಜ ಪ್ರತಿಯೊಂದಕ್ಕೂ ಕಾನೂನಿನಡಿ ಕಾರ್ಯಾಚರಿಸಲು ಸಾಧ್ಯವಿಲ್ಲ. ಇಲ್ಲಿ ನಂಬಿಕೆಗಳು ಮತ್ತು ವಿಶ್ವಾಸಗಳು ಇವೆ. ನ್ಯಾಯಾಲಯ ತೀರ್ಪು ನೀಡುವ ಮುನ್ನ ಸಂಬಂತ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬಹುದಿತ್ತು ಎಂದರು.
ಮೂರು ದಿನಗಳ ಬೈಠಕ್‌ನಲ್ಲಿ ಜಲಸಂರಕ್ಷಣೆ, ಪರಿಸರ ಸಂರಕ್ಷಣೆಗೆ ಯೋಜನೆ ಸೇರಿದಂತೆ ವಿವಿಧ ಸಂಘಟನಾತ್ಮಕ ವಿಚಾರಗಳನ್ನು ಚರ್ಚಿಸಲಾಯಿತು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಭಾಗ್ವತ್ – ಶಾ ಭೇಟಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್’ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಭೇಟಿ ಮಾಡಿದ್ದು, ರಾಮ ಮಂದಿರ ನಿರ್ಮಾಣ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅಮಿತ್ ಶಾ ಹಾಗೂ ಭಾಗವತ್ ಇಬ್ಬರು ಅನಂತರ ಭೇಟಿ ಮಾಡಿ ರಾಮಮಂದಿರ ಸೇರಿದಂತೆ ದೇಶದ ಮುಂದಿರುವ ಹಲವು ವಿಚಾರಗಳ ಕುರಿತಂತೆ ಮಾತುಕತೆ ನಡೆಸಿದರೆನ್ನಲಾಗಿದೆ. ಇದಲ್ಲದೆ ಆರ್’ಎಸ್‌ಎಸ್‌ನ ಹಲವು ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.