ಜಕಾರ್ತ: ಇಂಡೋನೆಷ್ಯಾದ ರಾಜಧಾನಿ ಜಕಾರ್ತದಿಂದ ಪಾಂಗ್ ಕಲ್ ಪಿನಾಗ್ ದ್ವೀಪಕ್ಕೆ ಹೊರಟಿದ್ದ ಲಯನ್ ಏರ್ ಜೆಟ್ ಭಾನುವಾರ ಪತನಗೊಂಡಿತ್ತು. ಈ ವಿಮಾನದಲ್ಲಿದ್ದ 189 ಮಂದಿ ಮೃತಪಟ್ಟಿದ್ದರು. ಈ ಅಪಘಾತ ನಡೆಯುವ ಹಿಂದಿನ ದಿನವೇ ವಿಮಾನದಲ್ಲಿ ತಾಂತ್ರಿಕ ತೊಂದರೆ ಇರುವ ವಿಚಾರ ಗೊತ್ತಾಗಿತ್ತಂತೆ!
ಬೋಯಿಂಗ್ 737 ಮ್ಯಾಕ್ಸ್ ವಿಮಾನ ಭಾನುವಾರ ಇಂಡೋನೆಷ್ಯಾದ ಬಾಲಿಯಿಂದ ಜಕಾರ್ತಕ್ಕೆ ಹೊರಟಿತ್ತು. ಹಾರಾಟದ ವೇಳೆ ತಾಂತ್ರಿಕ ಸಮಸ್ಯೆ ಉಂಟಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಪೈಲೆಟ್ ಸೂಚನೆ ನೀಡಿದ್ದ. ತಕ್ಷಣಕ್ಕೆ ವಾಪಾಸಾಗುವಂತೆ ಅಧಿಕಾರಿಗಳು ಪೈಲಟ್ಗೆ ಕೋರಿದ್ದರು. ಆದರೆ, ‘ತಾಂತ್ರಿಕ ತೊಂದರೆ ಬಗೆಹರಿದಿದೆ. ನಾವು ಜಕಾರ್ತಕ್ಕೆ ತೆರಳುತ್ತಿದ್ದೇವೆ’ ಎನ್ನುವ ಸಂದೇಶ ಪೈಲಟ್ನಿಂದ ಬಂದಿತ್ತು. ಅದೃಷ್ಟವಶಾತ್ ವಿಮಾನ ಜಕಾರ್ತದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿತ್ತು.
ಸೋಮವಾರ ಅಂದರೆ ಅಕ್ಟೋಬರ್ 29ರ ಬೆಳಗ್ಗೆ ಇದೇ ವಿಮಾನ ಪಾಂಗ್ ಕಲ್ ಪಿನಾಗ್ಗೆ ಪ್ರಯಾಣ ಬೆಳೆಸಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದ ಟೇಕ್ಆಫ್ ಆದ ಕೇವಲ 15 ನಿಮಿಷಗಳಲ್ಲಿ ವಿಮಾನ ಪತನಗೊಂಡಿದೆ. ವಿಮಾನದಲ್ಲಿದ್ದ 189 ಮಂದಿ ಮೃತಪಟ್ಟಿದ್ದಾರೆ. ವಿಮಾನದಲ್ಲಿ ತಾಂತ್ರಿಕ ತೊಂದರೆ ಇರುವ ವಿಚಾರ ಗೊತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ ತೋರಿದರೇ ಎನ್ನುವ ಅನುಮಾನ ಎದುರಾಗಿದೆ.
ಅಂದಹಾಗೆ, ಈ ವಿಮಾನದ ಪೈಲಟ್ ಭಾರತೀಯ ಮೂಲದ ಭಾವೇ ಸುನ್ಯೆಜ್ ಎಂದು ಗುರುತಿಸಲಾಗಿದೆ. ಭಾವೇ ಸುನ್ಯೆಜ್ ನವದೆಹಲಿ ಮೂಲದವರಾಗಿದ್ದು, ಇಲ್ಲಿಯ ಮಯೂರ ವಿಹಾರನ ಅಹಲ್ಕಾನ್ ಪಬ್ಲಿಕ್ ಸ್ಕೂಲ್ನಲ್ಲಿ ವಿದ್ಯಾಭ್ಯಾಸವನ್ನು ಮಾಡಿದ್ದರು. ಇವರು ಮಾರ್ಚ್ 2011 ರಿಂದ ಲಯನ್ ಏರ್ಲೈನ್ಸ್ ಗೆ ಕ್ಯಾಪ್ಟನ್ ಸೇವೆ ಸಲ್ಲಿಸುತ್ತಿದ್ದರು