ದೀಪಾವಳಿಯನ್ನು ವಿಶೇಷವಾಗಿ ಸ್ವಾಗತಿಸಲು ಸಜ್ಜಾದ ಮಹಿಳಾ ಉದ್ಯಮಿಗಳು

ಬೆಂಗಳೂರು, ನ.2- ಈ ಬಾರಿಯ ದೀಪಾವಳಿ ಹಬ್ಬವನ್ನು ಮಹಿಳಾ ಉದ್ಯಮಿಗಳು ವಿಶೇಷವಾಗಿ ಸ್ವಾಗತಿಸಲು ನಗರದಲ್ಲಿ ಸಿದ್ಧತೆ ನಡೆಸಿದ್ದಾರೆ.
ತಾವೇ ತಯಾರಿಸಿದ ತರಾವರಿ ವೈವಿಧ್ಯಮಯ ಉತ್ಪನ್ನಗಳನ್ನು ಒಂದೇ ಸೂರಿನಡಿ ಪ್ರದರ್ಶನ ಮತ್ತು ಮಾರಾಟ ಮಾಡುವ ಉದ್ದೇಶದಿಂದ ದೀಪಾವಳಿ ಕಲಾವೈಭವ-2018 ಹೆಸರಿನ ಬಹುದೊಡ್ಡ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

ನ.1ರಿಂದ ಈಗಾಗಲೇ ಆರಂಭಗೊಂಡಿದ್ದು, (ನ.4) ಭಾನುವಾರದವರೆಗೆ ನಾಲ್ಕು ದಿನಗಳ ಈ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಬಸವೇಶ್ವರ ನಗರದ ಗಂಗಮ್ಮ ತಿಮ್ಮಯ್ಯ ಕಲ್ಯಾಣ ಮಂಟಪ ಸನಿಹದ ಡಾ.ಬಿ.ಆರ್.ಅಂಬೇಡ್ಕರ್ ಆಟದ ಮೈದಾನ ಸಜ್ಜುಗೊಂಡಿದೆ.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಬೆಂಗಳೂರು ನಗರ ಜಿಲ್ಲೆ ಹಾಗೂ ಅವೇಕ್ ಸಂಸ್ಥೆ, ಬೆಂಗಳೂರು ಜಂಟಿಯಾಗಿ ಈ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸುತ್ತಿದೆ.

ಮೇಳದಲ್ಲಿ ಏನೇನು? ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಮಹಿಳಾ ಕರಕುಶಲ ಕರ್ಮಿಗಳು, ವಸ್ತ್ರೋದ್ಯಮ, ಕಸೂತಿ, ಹ್ಯಾಂಡ್ ಎಂಬ್ರಾಯ್‍ಡರಿ, ನೇಕಾರರಿಂದ ನೇಯ್ದ ಉಡುಪುಗಳು, ಗೃಹಾಲಂಕಾರ ವಸ್ತುಗಳು, ಪೂಜಾ ಸಾಮಗ್ರಿಗಳು, ಸೌಂದರ್ಯ ವರ್ಧಕಗಳು ಹೀಗೆ ವೈವಿಧ್ಯಮಯ ಉತ್ಪನ್ನಗಳು ಲಭ್ಯವಿರಲಿವೆ.

ಆಹಾರ ಮೇಳ: ಉತ್ತರ ಕರ್ನಾಟಕದ ವೈವಿಧ್ಯಮಯ ತಿನಿಸುಗಳು, ದಾವಣಗೆರೆ ಬೆಣ್ಣೆದೋಸೆ, ದಕ್ಷಿಣ ಭಾರತೀಯ ತಿನಿಸುಗಳು, ಬಾಯಿ ನೀರೂರಿಸುವ ಚಾಕೊಲೆಟ್, ವೈವಿಧ್ಯಮಯ ಕುಕ್ಕೀಸ್, ಕೇಕ್‍ಗಳು ಆಹಾರ ಪ್ರಿಯರನ್ನು ವಿಶೇಷವಾಗಿ ಆಕರ್ಷಿಸಲಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ