ರಾಮನಗರ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿಯಲು ಹಣದ ಲೆಕ್ಕಾಚಾರ ಇದೆಯೇ?

ಬೆಂಗಳೂರು: ರಾಮನಗರದ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ದಿಢೀರನೆ ಕಣದಿಂದ ಹಿಂದೆ ಸರಿದಿರುವುದು ರಾಜಕೀಯ ವಲಯದಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಕಾಂಗ್ರೆಸ್ ಮುಖಂಡ ಲಿಂಗಪ್ಪ ಅವರ ಪುತ್ರ ಎಲ್.ಚಂದ್ರಶೇಖರ್ ತಿಂಗಳ ಹಿಂದೆಯಷ್ಟೇ ಬಿಜೆಪಿ ಸೇರಿ, ಅಭ್ಯರ್ಥಿಯೂ ಆಗಿದ್ದರು. ಆದರೆ, ಇದೀಗ ದಿಢೀರನೇ ಚುನಾವಣಾ ಕಣದಿಂದಲೇ ಹಿಂದೆ ಸರಿದು, ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಿರುವುದರ ಹಿಂದೆ ಭಾರೀ ಲೆಕ್ಕಚಾರವಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಸೇರಿ, ಟಿಕೆಟ್ ಪಡೆದಿದ್ದ ಚಂದ್ರಶೇಖರ್, ಬಿಜೆಪಿಯಿಂದ ಚುನಾವಣೆಗೆ ಕೋಟ್ಯಂತರ ರೂಪಾಯಿ ಹಣ ನೀಡುತ್ತಾರೆಂದು ನಂಬಿದ್ದರು. ಹಣದ ಆಸೆಗೆ ಬಿಜೆಪಿ ಸೇರಿ ಅಭ್ಯರ್ಥಿ ಆಗಿದ್ದರು. ಆದರೆ, ಕೊನೆಗೆ ಕೈಗೆ ಹಣ ಸಿಗದೇ ನಿರಾಶೆಗೊಂಡಿದ್ದರು. ರಾಮನಗರ ಹಣದ ಜಬಾಬ್ದಾರಿ ಸಿ.ಪಿ. ಯೋಗೇಶ್ವರ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬಿಜೆಪಿ ಯುವ ಮುಖಂಡ ತುಳಸಿ ಮುನಿರಾಜು, ರಾಮನಗರ ಬಿಜೆಪಿ ಮುಖಂಡ ರುದ್ರೇಶ್ ಗೆ ಜಬಾಬ್ದಾರಿ ನೀಡಿದ್ದರು. ಆದರೆ ಯಾರೊಬ್ಬರು ಹಣ ಬಿಚ್ಚಲಿಲ್ಲ. ಅಲ್ಲದೇ, ಪ್ರಚಾರಕ್ಕೂ ಹಿಂದೇಟು ಹಾಕಿದ್ದರು.
ಸಿ.ಪಿ. ಯೋಗೇಶ್ವರ್, ಬಿಎಸ್ವೈ ಜೊತೆ ಹೆಚ್ಚು ಆಪ್ತರಾಗಿದ್ದರು. ಚಂದ್ರಶೇಖರ್ ಅವರನ್ನು ಯೋಗೇಶ್ವರ್ ಕರೆದುಕೊಂಡು ಬಂದಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಅಸಮಾಧಾನ ಹಿನ್ನೆಲೆಯಲ್ಲಿ ಡಿವಿಎಸ್ ನಯಾಪೈಸೆಯನ್ನೂ ಚುನಾವಣೆಗೆ ಬಿಚ್ಚಲಿಲ್ಲ. ಅತ್ತ ಸಿ.ಪಿ ಯೋಗೇಶ್ವರ್ ಕೂಡ ಎಲ್.ಚಂದ್ರಶೇಖರ್ ಬಗ್ಗೆ ನಿರಾಸಕ್ತಿ ತೋರಿದರು.
ಮುಂದೆ ನಮ್ಮದೇ ಸರ್ಕಾರ ಬರಲಿದೆ ಎಂದು ಚಂದ್ರಶೇಖರ್ ಬಳಿ ಹೇಳಿದ್ದ ಯೋಗೇಶ್ವರ್, ರಾಮನಗರದಲ್ಲಿ ಗೆದ್ದರೆ ಸಚಿವ, ಸೋತರೆ ನಿಗಮ ಮಂಡಳಿಗೆ ನೇಮಕ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ಹಣ ಮತ್ತು ಅಧಿಕಾರದ ಆಸೆಗೆ ಚಂದ್ರಶೇಖರ್ ಬಿಜೆಪಿ ಸೇರಿ, ಅಭ್ಯರ್ಥಿ ಆಗಿದ್ದರು. ಆದರೆ, ಕೊನೆಗೆ ಬಿಜೆಪಿ ನಾಯಕರ ನಿರಾಸೆ ನೋಡಿ, ಹತಾಶರಾದ ಚಂದ್ರಶೇಖರ್ ಈಗ ಚುನಾವಣಾ ಕಣದಿಂದಲೇ ಹಿಂದೆ ಸರಿದು, ಕಾಂಗ್ರೆಸ್ ಮುಖಂಡರ ಜೊತೆಗೆ ಇದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ