ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಇಲ್ಲಿನ ಹಾಸನಾಂಬೆ ದೇಗುಲದ ಬಾಗಿಲು ಇಂದಿನಿಂದ ತೆರೆಯಲಿದ್ದು, ಹಾಸನದ ಅದಿದೇವತೆ ಹಾಸನಂಬೆ ಒಂಬತ್ತು ದಿನಗಳ ಕಾಲ ಭಕ್ತರಿಗೆ ದರ್ಶನ ಸಿಗಲಿದೆ.
ಇಂದು ಮಧ್ಯಾಹ್ನ 12.30 ಕ್ಕೆ ಜಿಲ್ಲಾಡಳಿತ ದೇವಾಲಯದ ಬಾಗಿಲು ತೆಗೆಯಲಿದೆ. ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ನಲ್ಲಿ ಹಾಸನಾಂಬೆಗೆ ಪುಷ್ಪಾರ್ಚನೆ ಮಾಡಲಾಗುತ್ತಿದೆ. ಇಂದಿನಿಂದ ನವೆಂಬರ್ 9 ವರೆಗೆ ಹಾಸನಾಂಬೆ ದೇವಿಯ ದರ್ಶನ ಸಿಗಲಿದೆ. ಉತ್ಸವಕ್ಕೆ ಹಾಸನ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೇವಿಯ ಉತ್ಸವಕ್ಕೆ ಎಲ್ಲಾ ಎಂಪಿ, ಎಂಎಲ್ಎ, ಹಾಗೂ ಎಂಎಲ್ಸಿಗಳಿಗೂ ಜಿಲ್ಲಾಡಳಿತ ಆಹ್ವಾನ ನೀಡಿದೆ.
ಹಾಸನಾಂಬೆ ದೇಗುಲ ಹಲವು ಕಾರಣಗಳಿಗೆ ವಿಶೇಷತೆ ಪಡೆದುಕೊಂಡಿದೆ. ಈ ದೇಗುಲ ವರ್ಷದಲ್ಲಿ ಒಂಬತ್ತು ದಿನಗಳು ಮಾತ್ರ ತೆರೆಯಲಿದೆ. ಬಾಗಿಲು ಮುಚ್ಚುವಾಗ ಉರಿಸಿಟ್ಟ ದೀಪ ಹಾಗೂ ಹೂವುಗಳ, ವರ್ಷದ ನಂತರ ತೆರೆದಾಗಲು ದೀಪ ಉರಿಯುತ್ತಿರುತ್ತದೆ. ಹಾಗೂ ಹೂವುಗಳು ಬಾಡಿರುವುದಿಲ್ಲ ಎಂಬ ನಂಬಿಕೆ ಭಕ್ತರಲ್ಲಿ ಇದೆ.
ಆದರೆ, ಹಾಸನಾಂಬೆಯ ಪವಾಡಗಳೆಲ್ಲಾ ಸುಳ್ಳು. ಅಲ್ಲಿ ಯಾವುದೇ ಪವಾಡ ನಡೆಯುವುದಿಲ್ಲ. ಪವಾಡದ ಹೆಸರಲ್ಲಿ ಜನರ ಭಾವನೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ದೇವಸ್ಥಾನದಲ್ಲಿ ಯಾವುದೇ ಪವಾಡ ನಡೆಯುವುದಿಲ್ಲ. ಇವೆಲ್ಲವೂ ಸೃಷ್ಟಿತ ಪವಾಡಗಳು. ಇದರ ಹಿಂದಿನ ರಹಸ್ಯವನ್ನು ಬಯಲು ಮಾಡಬೇಕು ಎಂದು ತಿಂಗಳ ಹಿಂದೆ ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಡಳಿತಕ್ಕೆ ಒತ್ತಾಯಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ದೇಗುಲದ ಅರ್ಚಕರು ಇಲ್ಲಿ ಪವಾಡ ನಡೆಯುತ್ತದೆ ಎಂದು ಯಾರೂ ಹೇಳಿಲ್ಲ. ಆದರೆ, ಜನರ ನಂಬಿಕೆಗಳಿಗೆ ಅಡ್ಡಿಪಡಿಸಬೇಡಿ ಎಂದು ಹೇಳಿದ್ದರು.
ಮಾಧ್ಯಮದವರಿಗೆ ನಿರ್ಬಂಧ
ಇತಿಹಾಸದಲ್ಲೇ ಪ್ರಥಮ ಬಾರಿಗೆ ಮಾಧ್ಯಮಗಳನ್ನು ನಿರ್ಬಂಧಿಸಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರ ಉತ್ಸವ ಮಾಡುತ್ತಿದ್ದಾರೆ. ದೇವಾಲಯದಿಂದ ನೂರು ಮೀಟರ್ ಅಂತರದಲ್ಲಿಯೇ ಮಾಧ್ಯಮಗಳ ನಿರ್ಬಂಧ ವಿಧಿಸಲಾಗಿದೆ.