ನವದೆಹಲಿ,ಅ.31- ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿರುವ ರಫೇಲ್ ಯುದ್ದ ವಿಮಾನ ಖರೀದಿ ಸಂಬಂಧ ದರ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು 10 ದಿನದೊಳಗೆ ಮುಚ್ಚಿದ ಲಕೋಟಿಯಲ್ಲಿ ಸಲ್ಲಿಸಬೇಕೆಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಮುಂದುವರೆದ ಅರ್ಜಿ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. 10 ದಿನದೊಳಗೆ ಮೊಹರಾದ ಲಕೋಟಿಯಲ್ಲಿ ಇದರ ಪೂರ್ಣ ವಿವರಗಳನ್ನು ನಮಗೆ ನೀಡಬೇಕೆಂದು ಅಟಾರ್ನಿ ಜನರಲ್ಗೆ ಸೂಚನೆ ಕೊಟ್ಟಿದೆ.
ನಾವು ರಫೇಲ್ ಯುದ್ಧ ವಿಮಾನ ಖರೀದಿಯ ಬಗ್ಗೆ ಮಾಹಿತಿಯನ್ನು ಪಡೆಯಲು ಇಚ್ಛಿಸಿದ್ದೇವೆ. ದೇಶದ ಭದ್ರತಾ ದೃಷ್ಟಿಯಿಂದ ಇದನ್ನು ಬಹಿರಂಗಪಡಿಸಲು ಸಾಧ್ಯವಾಗದಿದ್ದರೂ ಮಾಹಿತಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಬಹುದು ಎಂದು ನ್ಯಾಯಪೀಠ ಆದೇಶಿಸಿ ಅರ್ಜಿ ವಿಚಾರಣೆಯನ್ನು ಮುಂದೂಡಿತು.
ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ , ಯು.ಯು.ಲಲಿತ್, ಕೆ.ಎಂ.ಜೋಸೆಫ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಮಾಹಿತಿ ನೀಡುವಾಗ ಅಧಿಕೃತ ಗೌಪ್ಯ ಕಾಯ್ದೆಯನ್ನು ಕಾಪಾಡಿಕೊಳ್ಳಬೇಕು ಎಂದು ಅಟಾರ್ನಿ ಜನರಲ್ಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.
ರಕ್ಷಣೆ ಮತ್ತು ದೇಶದ ದೃಷ್ಟಿಯಿಂದ ನೀವು ಗೌಪ್ಯತೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಾಗದಿದ್ದರೂ ನ್ಯಾಯಾಲಯ ಅದನ್ನು ತಿಳಿದುಕೊಳ್ಳಲು ಇಚ್ಛಿಸುತ್ತದೆ ಎಂದರು.
ಆಗ ಇದಕ್ಕೆ ಅಟಾರ್ನಿ ಜನರಲ್ ಆಕ್ಷೇಪಿಸಿ ಇದೊಂದು ಸೂಕ್ಷ್ಮ ಮತ್ತು ಗಂಭೀರವಾದ ವಿಷಯ. ಉಭಯ ರಾಷ್ಟ್ರಗಳ ನಡುವೆ ಮಾಡಿಕೊಂಡಿರುವ ಒಪ್ಪಂದದಂತೆ ಖರೀದಿ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಎಲ್ಲವೂ ಪಾರದರ್ಶಕವಾಗಿಯೇ ನಡೆದಿದೆ ಎಂದು ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು ಹಾಗಿದ್ದರೆ ಕೇಂದ್ರ ಸರ್ಕಾರ ಇದರ ಮಾಹಿತಿಯನ್ನು ಬಹಿರಂಗಪಡಿಸಲು ಏಕೆ ಹಿಂದೇಟು ಹಾಕುತ್ತಿದೆ ಎಂದು ಪ್ರಶ್ನಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಪೀಠ , 10 ದಿನದೊಳಗೆ ಮುಚ್ಚಿದ ಲಕೋಟಿಯಲ್ಲಿ ಪೂರ್ಣ ವಿವರ ನೀಡಬೇಕೆಂದು ಸೂಚಿಸಿದೆ.
ಕೇಂದ್ರದ ಮಾಜಿ ಸಚಿವರಾದ ಯಶವಂತ್ ಸಿನ್ಹಾ, ಅರುಣ್ ಶೌರಿ, ವಕೀಲ ಪ್ರಶಾಂತ್ ಭೂಷಣ್ ಅವರು, ರಫೇಲ್ ಯುದ್ಧ ವಿಮಾನ ಖರೀದಿ ಸಂಬಂಧ ವ್ಯಾಪಕ ಹಗರಣ ನಡೆದಿದ್ದು ಎಫ್ಐಆರ್ ದಾಖಲಿಸಬೇಕೆಂದು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿದ್ದಾರೆ.
ಅಲ್ಲದೆ ನ್ಯಾಯಾಲಯದ ಉಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಬೇಕೆಂಬುದು ಅರ್ಜಿದಾರರ ಒತ್ತಾಯ. ಇದಕ್ಕೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ಸಿಬಿಐ ತನಿಖೆ ನಡೆಯಬೇಕಾದರೆ ಕಾದು ನೋಡಬೇಕಾಗುತ್ತದೆ ಎಂದು ಸೂಚ್ಯವಾಗಿ ಹೇಳಿದ್ದಾರೆ.
ಫ್ರಾನ್ಸ್ ಜೊತೆ ರಕ್ಷಣಾ ಸಾಮಥ್ರ್ಯವನ್ನು ಹೆಚ್ಚಿಸಲು ಭಾರತ ರಫೇಲ್ ಯುದ್ದ ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬುದು ಕಾಂಗ್ರೆಸ್ ವಾದವಾಗಿದೆ.