
ಕೆವಾಡಿಯಾ: ಇಂದು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 143ನೇ ಜನ್ಮದಿನೋತ್ಸವ. ಈ ಹಿನ್ನೆಲೆ ನರ್ಮದಾ ನದಿ ತೀರದಲ್ಲಿ ನಿರ್ಮಿಸಲಾಗಿರುವ 182 ಮೀಟರ್ ಎತ್ತರದ ಸರ್ದಾರ್ ಪ್ರತಿಮೆ ಲೋಕಾರ್ಪಣೆ ಮಾಡಲಾಯಿತು. ಸ್ಟ್ಯಾಚು ಆಫ್ ಯುನಿಟಿ ಎಂದು ಕರೆಯಲಾಗುತ್ತಿರುವ ಈ ಪ್ರತಿಮೆ ಪ್ರಪಂಚದ ಅತಿ ಎತ್ತರದ ಪ್ರತಿಮೆ ಇದಾಗಿದೆ.
ಗುಜರಾತ್ನ ನರ್ಮದಾ ನದಿ ತೀರದಲ್ಲಿ ನಿರ್ಮಾಣ ವಾಗಿರುವ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದರು. ವಿಶೇಷವೆಂದರೆ ಪ್ರತಿ ವರ್ಷದ ಜ.26ರಂದು ದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದ ಮಾದರಿಯಲ್ಲೇ ಪಟೇಲ್ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಿತು.
ರಾಜ್ಪಥ್ನಲ್ಲಿ ನಡೆಯುವ ಕಾರ್ಯಕ್ರದಲ್ಲಿ 29 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಗಮಿಸಿದ್ದ ವಿವಿಧ ಕಲಾ ತಂಡಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದವು. ಭೂಸೇನೆ, ನೌಕಾಪಡೆ, ವಾಯುಪಡೆಗಳ ಯೋಧರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಯುದ್ಧ ವಿಮಾನಗಳ ಪ್ರದರ್ಶನವೂ ನಡೆಯಿತು.
ನ.3ರಿಂದ ಸಾರ್ವಜನಿಕರಿಗೆ ಮುಕ್ತ
ನ.3ರಿಂದ ಸರ್ದಾರ್ ಪಟೇಲ್ರ ಪ್ರತಿಮೆ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇದಕ್ಕಾಗಿ ಆನ್ ಲೈನ್ ನಲ್ಲೂ ಟಿಕೆಟ್ ಕಾಯ್ದಿರಿಸಲು ಅವಕಾಶವಿದೆ. ವಯಸ್ಕರಿಗೆ 120 ರೂ. ಹಾಗೂ ಮಕ್ಕಳಿಗೆ 60 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ.