ನವದೆಹಲಿ: ಎಟಿಎಂಗಳಿಂದ ದಿನವೊಂದಕ್ಕೆ ಹಣ ಹಿಂಪಡೆಯುವ ಮಿತಿಯನ್ನು ರೂ.40 ಸಾವಿರದಿಂದ 20 ಸಾವಿರಕ್ಕೆ ಕಡಿಗೊಳಿಸುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್’ಬಿಐ) ನಿರ್ಧಾರ ಬುಧವಾರದಿಂದ ಜಾರಿಗೆ ಬರಲಿದೆ.
ಎಸ್’ಬಿಐನ ಕ್ಲಾಸಿಕ್ ಮತ್ತು ಮಾಯಿಸ್ಟ್ರೋ ಕಾರ್ಡ್ ಬಳಕೆದಾರರಿಗೆ ಈ ಹೊಸ ನಿಯಮ ಅನ್ವಯವಾಗಲಿದೆ.
ದೀಪಾವಳಿಗೂ ಮುನ್ನ ಜಾರಿಗೆ ಬರುತ್ತಿರುವ ಈ ಕ್ರಮ, 40 ಕೋಟಿ ಎಸ್’ಬಿಐ ಗ್ರಾಹಕರ ಮೇಲೆ ಗಂಭೀರ ಪರಿಣಾಮ ಬೀರಲಿದೆ.
20 ಸಾವಿರಗಿಂತ ಅಧಿಕ ಮೊತ್ತವನ್ನು ಎಟಿಎಂನಿಂದ ಹಿಂಪಡೆಯುವ ಆಸೆ ಇದ್ದಲ್ಲಿ ಉನ್ನತ ಶ್ರೇಣಿಯ ಡೆಬಿಟ್ ಕಾರ್ಡ್ ಗಳನ್ನು ಗ್ರಾಹಕರು ಪಡೆದುಕೊಳ್ಳಬಹುದು.
ಎಸ್’ಬಿಐ ಗ್ರಾಹಕರು ದಿನವೊಂದಕ್ಕೆ ಸರಾಸರಿ ರೂ.20 ಸಾವಿರಗಿಂತ ಕಡಿಮೆ ಹಣವನ್ನು ಎಟಿಎಂ ಮೂಲಕ ಪಡೆಯುತ್ತಿದ್ದಾರೆ. ನಕಲಿ ಎಟಿಎಂ ಕಾರ್ಡ್ ಸೃಷ್ಟಿಸಿ ವಂಚಿಸುವವರು ಗರಿಷ್ಠ ಮಿತಿಯಾದ ರೂ.40 ಸಾವಿರ ವನ್ನು ಬಳಸಿಕೊಳ್ಳುತ್ತಿದ್ದರು. ಹೀಗಾಗಿ ಆ ವಂಚನೆ ತಡೆಗಟ್ಟಲು, ಡಿಜಿಟಲ್ ವಹಿವಾಟು ಉತ್ತೇಜಿಸಲು ಹಣ ಹಿಂಪಡೆಯುವ ಮಿತಿ ಕಡಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.