ಕಾಬೂಲ್, ಅ.31- ಅಫ್ಘಾನಿಸ್ತಾನದಲ್ಲಿ ಉಗ್ರರ ಹಿಂಸಾಚಾರ ಅವ್ಯಾಹತವಾಗಿ ಮುಂದುವರಿದಿದೆ. ರಾಜಧಾನಿ ಕಾಬೂಲ್ ಹೊರವಲಯದಲ್ಲಿರುವ ದೇಶದ ಅತಿ ದೊಡ್ಡ ಕಾರಾಗೃಹದ ಹೊರಗೆ ನಡೆದ ಮಾನವ ಬಾಂಬ್ ದಾಳಿಯಲ್ಲಿ ಜೈಲಿನ ಕಾರ್ಮಿಕರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಒಂಭತ್ತು ಮಂದಿ ಮೃತಪಟ್ಟು ಅನೇಕರು ತೀವ್ರ ಗಾಯಗೊಂಡಿದ್ದಾರೆ.
ಬಂದೀಖಾನೆ ಉದ್ಯೋಗಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ನನ್ನು ಗುರಿಯಾಗಿಟ್ಟುಕೊಂಡು ಭಯೋತ್ಪಾದಕರು ಈ ದಾಳಿ ನಡೆಸಿದ್ದಾರೆ. ಪುಲ್-ಇ-ಚಾಕ್ರಿ ಸೆರೆಮನೆ ಹೊರಗೆ ನಡೆದ ಆತ್ಮಾಹುತಿ ದಾಳಿಯಲ್ಲಿ ಕಾರ್ಮಿಕರು ಮತ್ತು ಪೆÇಲೀಸರೂ ಸೇರಿದಂತೆ ಒಂಬತ್ತು ಮಂದಿ ಹತರಾಗಿದ್ದಾರೆ ಎಂದು ಒಳಾಡಳಿತ(ಗೃಹ) ಸಚಿವಾಲಯದ ವಕ್ತಾರ ನಜೀಬ್ ಡ್ಯಾನಿಶ್ ಹೇಳಿದ್ದಾರೆ.
ಈ ಜೈಲಿನಲ್ಲಿ ತಾಲಿಬಾನ್ ಉಗ್ರರೂ ಸೇರಿದಂತೆ ನೂರಾರು ಕೈದಿಗಳಿದ್ದಾರೆ. ತಮ್ಮವರನ್ನು ಭೇಟಿ ಮಾಡಲು ಸಾಕಷ್ಟು ಸಂಖ್ಯೆ ವೀಕ್ಷಕರು ಕಾರಾಗೃಹದ ಮುಖ್ಯ ಗೇಟ್ ಬಳಿ ಜಮಾವಣೆಗೊಂಡಿದ್ದ ಸಂದರ್ಭದಲ್ಲೇ ಈ ಮಾನವ ಬಾಂಬ್ ದಾಳಿ ನಡೆದಿದೆ ಎಂದು ಜೈಲಿನ ಹಿರಿಯ ಅಧಿಕಾರಿ ಅಬ್ದುಲ್ಲಾ ಕರಿಮಿ ತಿಳಿಸಿದ್ಧಾರೆ.
ತಾಲಿಬಾನ್ ಬಂಡುಕೋರರಿಂದಲೇ ಈ ದಾಳಿ ನಡೆದಿರುವ ಸಾಧ್ಯತೆ ಇದೆ.