ಕಾಲೇಜ್ ಕುಮಾರ್ ಚಿತ್ರದ ಯಶಸ್ಸು ವಿಕ್ಟರಿ ಸೀಕ್ವೆಲ್ ಚಿತ್ರ ನಿರ್ದೇಶನಕ್ಕೆ ಅವಕಾಶ ಮಾಡಿಕೊಟ್ಟಿತು ಎಂದು ನಿರ್ದೇಶಕ ಹರಿ ಸಂತೋಷ್ ಹೇಳಿದ್ದಾರೆ.
ವಿಕ್ಟರಿ ಚಿತ್ರವನ್ನು ಖ್ಯಾತ ನಿರ್ದೇಶಕ ನಂದ ಕಿಶೋರ್ ನಿರ್ದೇಶನ ಮಾಡಿದ್ದರು. ಆದರೆ ವಿಕ್ಟರ್ ಸೀಕ್ವೆಲ್ ಗೆ ನನ್ನನ್ನು ಆಯ್ಕೆ ಮಾಡಲಾಗಿದೆ. ನನ್ನ ಕಾಲೇಜ್ ಕುಮಾರ ಚಿತ್ರದ ಕೆಲ ದೃಶ್ಯಗಳು ನನ್ನನ್ನು ವಿಕ್ಟರಿ ಸೀಕ್ವೆಲ್ ನಿರ್ದೇಶನಕ್ಕೆ ಆಯ್ಕೆ ಮಾಡಲು ಕ್ರಿಯೆಟಿವ್ ನಿರ್ದೇಶಕ ತರುಣ್ ಸುದೀರ್ ಮತ್ತು ನಿರ್ಮಾಪಕ ತರುಣ್ ಶಿವಪ್ಪ ಅವರಿಗೆ ಪ್ರೇರಣೆ ನೀಡಿತು ಎಂದು ಹರಿ ಸಂತೋಷ್ ಹೇಳಿದ್ದಾರೆ.
ವಿಕ್ಟರಿ ಸೀಕ್ವೆಲ್ ಚಿತ್ರ ಸಂಪೂರ್ಣ ಹಾಸ್ಯಮಯ ಚಿತ್ರವಾಗಿದೆ. ಇದು ನಾನು ನಿರ್ದೇಶನ ಮಾಡುತ್ತಿರುವ ಮೊದಲ ಸಂಪೂರ್ಣ ಹಾಸ್ಯಮಯ ಚಿತ್ರವಾಗಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ನನ್ನ ಎಲ್ಲಾ ಚಿತ್ರಕ್ಕೆ ಕೆಲ ಸಲಹೆಗಳನ್ನು ನೀಡುತ್ತಿದ್ದರು. ಅವರೇ ವಿಕ್ಟರಿ ಸೀಕ್ವೆಲ್ ಚಿತ್ರದ ಕುರಿತು ನನಗೆ ಹೇಳಿದ್ದರು. ಅದರಂತೆ ನಾನು ಈ ಚಿತ್ರದ ನಿರ್ದೇಶನಕ್ಕೆ ಕೈಹಾಕಿದೆ ಎಂದರು.
ಇನ್ನು ಚಿತ್ರದ ಕ್ವಾಲಿಟಿ ವಿಚಾರದಲ್ಲಿ ಯಾವುದೇ ಕಟ್ಟುಪಾಡುಗಳಿಗೂ ಒಳಗಾಗದ ಹರಿ ಸಂತೋಷ್ ಅವರು ನಿರ್ಮಾಪಕ ತರುಣ್ ಶಿವಪ್ಪ ಅವರಿಗೆ ಕೆಲ ಕಂಡಿಷನ್ ಗಳನ್ನು ಹಾಕಿ ತಮಗೆ ಬೇಕಾದ ಉಪಕರಣಗಳನ್ನು ತರಿಸಿಕೊಂಡರಂತೆ. ಬರೀ ನಾಲ್ಕು ದಿನದ ಚಿತ್ರೀಕರಣಕ್ಕಾಗಿ ಆಸ್ಟ್ರೇಲಿಯಾದಿಂದ ಕ್ಯಾಮೆರಾವನ್ನು ತರಿಸಿಕೊಳ್ಳಲಾಗಿತ್ತು. ವಿಕ್ಟರಿ ಸೀಕ್ವೆಲ್ ನನ್ನ ವೃತ್ತಿ ಬದುಕಿನ ಅತೀ ಹೆಚ್ಚು ಬಜೆಟ್ ನ ಚಿತ್ರವಾಗಿದೆ ಎಂದು ಸಂತೋಷ್ ಹೇಳಿದ್ದಾರೆ.