ಬೆಂಗಳೂರು, ಅ.30- ಭ್ರಷ್ಟರು, ಕಳ್ಳರೂ ಪೂಜೆ-ಪುನಸ್ಕಾರ ಮಾಡುತ್ತಾರೆ.ದೇವರು ಅವರಿಗೂ ಒಳ್ಳೆಯ ಬುದ್ಧಿ ಕೊಡಲಿ ಎಂದು ಪ್ರಾರ್ಥಿಸುವುದಾಗಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆ ಹೇಳಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ಸಾಂಪ್ರದಾಯಿಕ ದೀಪವನ್ನು ರಿಮೋಟ್ ಮೂಲಕ ಬೆಳಗಿ ಸಾಂಪ್ರದಾಯಿಕತೆಗೆ ತಾಂತ್ರಿಕ ಸ್ಪರ್ಶ ನೀಡಿರುವ ಪೂಜಾರಿ ಡಾಟ್ ಸರ್ವಿಸೆಸ್‍ನ ವೆಬ್‍ಸೈಟ್ ಮತ್ತು ಮೊಬೈಲ್ ಆ್ಯಪ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ನಮ್ಮ ಮನೆಯಲ್ಲಿ ಪೂಜೆ-ಪುನಸ್ಕಾರಗಳು ಕಡಿಮೆ.ನಮಗೆ ದೇವರಲ್ಲಿ ನಂಬಿಕೆ ಇದೆ.ಆಗಾಗ ದೇವಾಲಯಗಳಿಗೆ ಹೋಗುತ್ತಿರುತ್ತೇವೆ. ಜೈಲಿಗೆ ಹೋಗಿ ಹೊರಬಂದವರು ಹಾಗೂ ಜಾಮೀನು ಪಡೆದು ಬಂದವರಿಗೆ ಹಾರ ಹಾಕಿ ಸ್ವಾಗತಿಸುವ ಆತಂಕಕಾರಿ ಬೆಳವಣಿಗೆ ನಮ್ಮ ಸಮಾಜದಲ್ಲಿನ ನೈತಿಕ ಅಧಃಪತನಕ್ಕೆ ಸಾಕ್ಷಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಾವು ದೇವಾಲಯಗಳಲ್ಲಿ ಪೂಜೆ ಮಾಡುವಾಗ ದೇವರಿಗೆ ಹತ್ತಿರವಾಗಿರುವ ಬ್ರಾಹ್ಮಣರನ್ನೂ ಕೂಡಾ ನಾವು ದೇವರನ್ನಾಗಿಯೇ ಕಾಣುತ್ತೇವೆ ಎಂದು ನಟಿ ತಾರಾ ಅನೂರಾಧ ಹೇಳಿದರು.
ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರದ ಜನನಕ್ಕೆ ಕಾರಣವಾದ ಶ್ವೇತಕುಮಾರ ಚರಿತ್ರೆಯಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಮೀ ಟೂ ಪ್ರಕರಣ ದಾಖಲಾಗಿದೆ ಎಂದು ಹರಿಹರಾತ್ಮಜ ಪೀಠಾಧಿಪತಿ ಡಾ. ವಿಶ್ವ ಸಂತೋಷ ಭಾರತಿ ಶ್ರೀಪಾದರು, ಆ ಕಾಲದಲ್ಲಿಯೇ ಶ್ವೇತಕುಮಾರನು ತನ್ನೊಡನೆ ನಡೆದು ಕೊಂಡ ರೀತಿಯನ್ನು ಪ್ರತಿಭಟಿಸಿದ ರಂಭೆ ಯಮಧರ್ಮನಲ್ಲಿ ದೂರದಾಖಲಿಸುತ್ತಾಳೆ ಎಂಬ ಶಿವ ಪಂಚಾಕ್ಷರೀ ಮಹಾತ್ಮೆಯ ಕಥನವನ್ನು ಉದಾಹರಿಸಿದರು.
ಸುಪ್ರಸಿದ್ಧ ಹಿನ್ನೆಲೆ ಗಾಯಕಿ ಕಸ್ತೂರಿ ಶಂಕರ್, ಪೂಜಾರಿ ಡಾಟ್ ಸರ್ವಿಸಸ್ ಬೆಳಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.