ಉಪ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭ

ಬೆಂಗಳೂರು,ಅ.30- ರಾಜ್ಯ ರಾಜಕಾರಣದಲ್ಲಿ ಹೊಸ ಸಂದೇಶ ನೀಡಲಿದೆ ಎಂದು ಹೇಳಲಾಗುತ್ತಿರುವ ಮೂರು ಲೋಕಸಭೆ, ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸೋಲು-ಗೆಲುವಿನ ಮಧ್ಯೆ ನಾನಾ ರೀತಿಯ ಲೆಕ್ಕಾಚಾರಗಳು ಆರಂಭವಾಗಿವೆ.
ಶತಾಯಗತಾಯ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಬಗ್ಗು ಬಡಿಯಲೇಬೇಕೆಂದು ತೀರ್ಮಾನಿಸಿರುವ ಕಾಂಗ್ರೆಸ್ – ಜೆಡಿಎಸ್ ಹಳೆ ವೈಮನಸ್ಸುಗಳನ್ನು ಮರೆತು ಒಂದಾಗಿರುವುದು ಈ ಚುನಾವಣೆಯ ವಿಶೇಷಗಳಲ್ಲೊಂದು.

ಮೇಲ್ನೋಟಕ್ಕೆ ಎಲ್ಲ ಸರಿ ಇದೆ ಎಂಬಂತೆ ಕಂಡುಬಂದರೂ ಈಗಲೂ ಹಾವು ಮುಂಗೂಸಿಯಂತೆ ಕಿತ್ತಾಡುವ ಬಿಜೆಪಿ ನಾಯಕರು ತಮ್ಮ ಹಳೆಯ ಚಾಳಿಯನ್ನು ಬಿಟ್ಟು ಅಭ್ಯರ್ಥಿಗಳ ಗೆಲುವಿಗೆ ಟೊಂಕ ಕಟ್ಟಿ ನಿಂತಿರುವುದು ಮತ್ತೊಂದು ವಿಶೇಷವಾಗಿದೆ.

ಹೀಗೆ ಮೂರು ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಹರಸಾಹಸ ನಡೆಸುತ್ತಿವೆ. ಫಲಿತಾಂಶ ಕೊಂಚ ಏರುಪೇರಾದರೂ ದೋಸ್ತಿ ಪಕ್ಷಗಳ ಸರ್ಕಾರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಮಾತುಗಳು ಕೇಳಿಬರುತ್ತಿವೆ.
ಹೀಗಾಗಿ ಪ್ರತಿಪಕ್ಷಗಳ ಕೈ ಮೇಲಾಗದಂತೆ ಉಪಸಮರದಲ್ಲಿ ಗೆದ್ದು ಬಿಜೆಪಿಯ ಆಪರೇಷನ್‍ಗೆ ಮೇಜರ್ ಸರ್ಜರಿ ಮಾಡಲು ದೋಸ್ತಿ ಪಕ್ಷಗಳು ಮುಂದಾಗಿವೆ.
ಈ ಚುನಾವಣೆಯಲ್ಲಿ ಗೆದ್ದರೆ ಸಹಜವಾಗಿ ಪರಿಸ್ಥಿತಿಯ ಲಾಭ ಪಡೆದುಕೊಳ್ಳಬಹುದೆಂಬ ಹುಮ್ಮಸ್ಸಿನಲ್ಲಿರುವ ಬಿಜೆಪಿ ಐದು ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳ ಕಡೆ ವಿಶೇಷ ಗಮನಹರಿಸಿ ಕಾಂಗ್ರೆಸ್‍ಗೆ ಟಕ್ಕರ್ ಕೊಡಲು ರಣತಂತ್ರ ರೂಪಿಸಿದೆ.

ಅಭಿವೃದ್ಧಿಯ ಚರ್ಚೆಯೇ ಇಲ್ಲ:
ನವೆಂಬರ್ 3ರಂದು ನಡೆಯಲಿರುವ ಶಿವಮೊಗ್ಗ, ಮಂಡ್ಯ, ಬಳ್ಳಾರಿ ಲೋಕಸಭೆ ಹಾಗೂ ಜಮಖಂಡಿ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರ ಪ್ರಚಾರದಲ್ಲಿ ಅಭಿವೃದ್ದಿಯ ಮಾತುಗಳು ಎಲ್ಲೂ ಕೇಳಿಬರುತ್ತಿಲ್ಲ.
ತಾವು ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಜನತೆಗೆ ಮಾಡಿರುವ ಹೊಸ ಕಾರ್ಯಕ್ರಮಗಳು ಏನು ಎಂಬುದನ್ನು ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಕೂಡ ಎಲ್ಲಿಯೂ ಬಿಂಬಿಸುತ್ತಿಲ್ಲ.
ರೈತರು ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಪಡೆದಿದ್ದ ಸಾಲ ಮನ್ನಾದ ಬಗ್ಗೆಯಾಗಲಿ, ತಮ್ಮ ಹೊಸ ಕಾರ್ಯಕ್ರಮಗಳ ಘೋಷಣೆ ಬಗ್ಗೆಯಾಗಲಿ ಎಲ್ಲಿಯೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಸೇರಿದಂತೆ ಯಾವುದೇ ನಾಯಕರು ತಮ್ಮ ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡುತ್ತಿಲ್ಲ.

ಇನ್ನು ಪ್ರತಿಪಕ್ಷ ಬಿಜೆಪಿ ಕೂಡ ಕೇಂದ್ರ ಸರ್ಕಾರದ ಸಾಧನೆಗಳು ಪ್ರತಿಪಕ್ಷವಾಗಿ ಸದನದಲ್ಲಿ ನಿರ್ವಹಿಸುತ್ತಿರುವ ಪಾತ್ರ, ಅನ್ನದಾತನ ನೆರವಿಗೆ ಸ್ಪಂದಿಸಿರುವುದು, ಸರ್ಕಾರದ ವೈಫಲ್ಯಗಳು ಯಾವುದರ ಬಗ್ಗೆಯೂ ತುಟಿಪುಟಿಕ್ ಎನ್ನುತ್ತಿಲ್ಲ.
ಬದಲಿಗೆ ವೈಯಕ್ತಿಕ ಮಟ್ಟದ ಆರೋಪ-ಪ್ರತ್ಯಾರೋಪಗಳೇ ಎಲ್ಲೆಡೆ ಮೇಳೈಸುತ್ತಿವೆ. ಕನಿಷ್ಠ ಮಟ್ಟದ ಭಾಷೆ ಬಳಸುವ ಮೂಲಕ ಜನರ ಮುಂದೆ ಜನಪ್ರತಿನಿಧಿಗಳು ಬೆತ್ತಲಾಗುತ್ತಿರುವುದು ಈ ಚುನಾವಣೆಯ ಮತ್ತೊಂದು ವಿಶೇಷ.

ಹೇಗಿದೆ ಚಿತ್ರಣ:
ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಅಭಿವೃದ್ದಿಗಿಂತ ಜಾತಿಯೇ ಪ್ರಧಾನ ವಿಷಯವಾಗಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಸೇರಿದಂತೆ ಎಲ್ಲರೂ ತಳಮಟ್ಟದ ಸಮುದಾಯಗಳಿಂದ ಹಿಡಿದು ಮೇಲ್ವರ್ಗದವರನ್ನು ಓಲೈಕೆ ಮಾಡುವ ಮೂಲಕ ಜಾತಿ ರಾಜಕಾರಣವನ್ನು ಈ ಚುನಾವಣೆಯಲ್ಲಿ ತಲೆ ಮೇಲೆ ಹೊತ್ತು ಕುಣಿಯುತ್ತಿದ್ದಾರೆ.
ಒಕ್ಕಲಿಗರ ಪ್ರಾಬಲ್ಯವಿರುವ ರಾಮನಗರ ಮತ್ತು ಮಂಡ್ಯದಲ್ಲಿ ಸಹಜವಾಗಿ ಜೆಡಿಎಸ್ ಮೇಲುಗೈ ಸಾಧಿಸುವುದರಿಂದ ಈ ಭಾಗದಲ್ಲಿ ಓಲೈಕೆ ರಾಜಕಾರಣ ಕಂಡುಬರುತ್ತಿಲ್ಲ.

ಜೆಡಿಎಸ್ ಅಭ್ಯರ್ಥಿಗಳಾಗಿ ಮಂಡ್ಯದಿಂದ ಎಲ್.ಆರ್.ಶಿವರಾಮೇಗೌಡ ಹಾಗೂ ರಾಮನಗರದಿಂದ ಅನಿತಾಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ.ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಇಲ್ಲಿ ಇತರೆ ಪಕ್ಷಗಳನ್ನು ಹಿಂದಿಕ್ಕಿ ಹೆಚ್ಚಿನ ಸ್ಥಾನ ಗಳಿಸಿತ್ತು.
ಹಾಗಾಗಿ ಈ ಉಪಚುನಾವಣೆಯಲ್ಲಿ ಜನತೆಗೆ ಈ ಎರಡೂ ಕ್ಷೇತ್ರಗಳ ಬಗ್ಗೆ ಅಂತಹ ಕುತೂಹಲವಿಲ್ಲ. ದಶಕಗಳಿಂದ ಕಾಂಗ್ರೆಸ್-ಜೆಡಿಎಸ್ ಬದ್ಧ ವೈರಿಗಳಂತೆ ಬಡಿದಾಡಿಕೊಂಡು ರಾಜಕಾರಣ ಮಾಡಿದ್ದರು.

ಈಗ ಬಿಜೆಪಿಯನ್ನು ಸೋಲಿಸಬೇಕೆಂಬ ಕಾರಣಕ್ಕಾಗಿ ಒಲ್ಲದ ಮನಸ್ಸಿನಿಂದಲೇ ಒಂದಾಗಿದ್ದಾರೆ. ಆದರೂ ಮಂಡ್ಯ ಮತ್ತು ರಾಮನಗರದಲ್ಲಿ ನಾಯಕರು ಒಂದಾಗಿದ್ದರೂ ತಳಮಟ್ಟದ ಕಾರ್ಯಕರ್ತರು ಮಾತ್ರ ಹಾವು ಮುಂಗೂಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದಾರೆ.
ರಾಜ್ಯದ ಗಮನಸೆಳೆದಿರುವ ಶಿವಮೊಗ್ಗ, ಬಳ್ಳಾರಿ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಹಿಂದೆಂದೂ ಕಾಣದ ಜಾತಿ ರಾಜಕಾರಣ ಕಂಡುಬರುತ್ತಿದೆ.

ಮೂರು ಪಕ್ಷಗಳು ಜಿದ್ದಿಗೆ ಬಿದ್ದವರಂತೆ ಜಾತಿಗಳನ್ನು ಓಲೈಸಿಕೊಳ್ಳಲು ಮುಂದಾಗಿದ್ದಾರೆ.ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ರಾಘವೇಂದ್ರ, ಜೆಡಿಎಸ್‍ನಿಂದ ಮಧುಬಂಗಾರಪ್ಪ ಕಣಕ್ಕಿಳಿದಿದ್ದಾರೆ.

ಜಿಲ್ಲೆಯಲ್ಲಿ ಸೋಲು, ಗೆಲುವನ್ನು ನಿರ್ಧರಿಸಬಹುದಾದ ಈಡಿಗ ಸಮುದಾಯದ ಮೇಲೆ ಎಲ್ಲರ ಕಣ್ಣು ಬಿದ್ದಿದೆ.ಮಧುಬಂಗಾರಪ್ಪ ಅದೇ ಸಮುದಾಯಕ್ಕೆ ಸೇರಿದ್ದಾರೆ.ಕಳೆದ 15 ದಿನಗಳಿಂದ ಎಲ್ಲ ಪಕ್ಷಗಳು ಜಾತಿ ಸಮಾವೇಶ, ಮುಖಂಡರ ಸಭೆ, ಮದುವೆ, ಹಬ್ಬ-ಹರಿದಿನ ಸೇರಿದಂತೆ ಎಲ್ಲ ಕಾರ್ಯಕ್ರಮಗಳಿಗೂ ರೊಕ್ಕ ಹರಿಸುತ್ತಿದ್ದಾರೆ.
ಗಣಿ ಜಿಲ್ಲೆ ಬಳ್ಳಾರಿಯಲ್ಲೂ ವಾಲ್ಮೀಕಿ ಸಮುದಾಯ ನಿರ್ಣಾಯಕವಾಗಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಈ ಸಮುದಾಯದವರ ಓಲೈಕೆಗೆ ಶತಪ್ರಯತ್ನ ಮಾಡುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿ ಜೆ.ಶಾಂತ ಸಹೋದರ ಶ್ರೀರಾಮುಲು ವಾಲ್ಮಿಕಿ ಸಮುದಾಯಕ್ಕೆ ಸೇರಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಕೂಡ ಇದೇ ಸಮುದಾಯದವರಾಗಿದ್ದಾರೆ. ಇಡೀ ಜಿಲ್ಲೆಯಲ್ಲಿ ವಾಲ್ಮೀಕಿ ಸಮುದಾಯವನ್ನೇ ಗುರಿಯಾಗಿಟ್ಟುಕೊಂಡು ಪಕ್ಷಗಳು ಮತ ಬೇಟೆಗೆ ಇಳಿದಿವೆ.
ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಕ್ಷೇತ್ರದಲ್ಲಿ ಗಾಣಿಗ ಮತ್ತು ಬಣಜಿಗ ಸಮುದಾಯಗಳು ನಿರ್ಣಾಯಕವಾಗಿರುವುದರಿಂದ ಇಲ್ಲೂ ಕೂಡ ಜಾತಿ ಓಲೈಕೆ ರಾಜಕಾರಣ ನಡೆಯುತ್ತಿದೆ.
ಈ ಉಪಸಮರದಲ್ಲಿ ದೋಸ್ತಿ ಪಕ್ಷಗಳು ಮೇಲುಗೈ ಸಾಧಿಸಿದರೆ ಸಹಜವಾಗಿ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆಯಾಗಲಿದೆ ಎಂಬು ಮಾತು ಕೇಳಿಬರುತ್ತಿದೆ.
ಒಂದು ವೇಳೆ ಜೆಡಿಎಸ್ ತನ್ನ ಭದ್ರ ಕೋಟೆಯನ್ನು ಉಳಿಸಿಕೊಂಡು ಬಿಜೆಪಿ ಶಿವಮೊಗ್ಗ , ಬಳ್ಳಾರಿ ಮತ್ತು ಜಮಖಂಡಿಯಲ್ಲಿ ವಿಜಯದ ಪತಾಕೆ ಹಾರಿಸಿದರೆ ಮುಂದೆ ನಡೆಯಲಿರುವ ಆಟಗಳು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ