ಬೆಂಗಳೂರು,ಅ.30- ಕರ್ನಾಟಕ ಸರ್ಕಾರ ನ.10ರಂದು ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿಯನ್ನು ಆಚರಣೆ ಮಾಡಬಾರದು ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಚಿದಾನಂದಮೂರ್ತಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪು ಒಬ್ಬ ದೇಶ ಪ್ರೇಮಿ. ವೀರ ಹುತಾತ್ಮ. ಸರ್ವಧರ್ಮ ಪ್ರೇಮಿ ಎಂದು ಹಲವರು ವಿಜೃಂಭಿಸಿದ್ದಾರೆ. ಆದರೆ ಅವರ ಮೂಲ ದಾಖಲೆಗಳನ್ನು ಪರಿಶೀಲಿಸಿದರೆ ಅವನೊಬ್ಬ ಕ್ರೂರಿ, ಮತಾಂಧ, ಕರ್ನಾಟಕದ ಚರಿತ್ರೆಗೆ ಕಳಂಕ ತಂದಿದ್ದಾನೆ ಎಂದು ಆರೋಪಿಸಿದರು.
ಟಿಪ್ಪು ಹಿಂದೂ ಧರ್ಮ ವಿರೋಧಿ ಎಂಬುದಕ್ಕೆ ನೂರಾರು ಸಾಕ್ಷಿಗಳಿವೆ. ಅವನ ಖಡ್ಗದ ಮೇಲಿರುವ ಶಾಸನವು ಕಾಫಿರ(ಮುಸ್ಲಿಂಮೇತರರು)ರನ್ನು ಕೊಲ್ಲುವ ಆದೇಶವನ್ನು ನೀಡುತ್ತದೆ ಎಂದು ಕಿಡಿಕಾರಿದರು.
ಈತ ಹಿಂದೂ ದೇವಾಲಯಗಳನ್ನು ನಾಶಪಡಿಸಿದ್ದಾನೆ. ಇಂಥವರ ಜಯಂತಿಯನ್ನು ನಾವು ಏಕೆ ಮಾಡಬೇಕು. ಶ್ರೀರಂಗಪಟ್ಟಣದಲ್ಲಿ ಹಿಂದೂ ದೇವಾಲಯವನ್ನು ಕೆಡವಿ ಅವನು ಕಟ್ಟಿದ ಮಸೀದಿಯ ಶಾಸನವು ಮುಸ್ಲಿಂಮೇತರರನ್ನು ನಿರ್ಮೂಲನೆ ಮಾಡಲು ಅಲ್ಲಾನನ್ನು ಪ್ರಾರ್ಥಿಸಿದೆ. ಅವನ ಶಾಸನವೊಂದರಲ್ಲಿ ಮುಸ್ಲಿಂ ಅಲ್ಲದ ಎಲ್ಲ ಪುರುಷರನ್ನು ಕೊಂದು ಅವರ ಪತ್ನಿ ಮಕ್ಕಳನ್ನು ತೊತ್ತುಗಳನ್ನಾಗಿ ಮಾಡಿಕೊಂಡು ಅವರ ಆಸ್ತಿಗಳನ್ನು ಮುಸ್ಲಿಮರಿಗೆ ಹಂಚಬೇಕೆಂದು ವಿವರಿಸಿದೆ.
ಈ ಬಗ್ಗೆ ಕರ್ನಾಟಕ ಸರ್ಕಾರದ ಗಮನಕ್ಕೆ ಈ ಹಿಂದೆಯೇ ತಂದಿದ್ದರೂ ಸಹ ಟಿಪ್ಪು ಜಯಂತಿಯನ್ನು ಆಚರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಾಂಧಿ, ಬಸವ, ವಾಲ್ಮೀಕಿ ಜಯಂತಿಯಂತೆ ಶಿಶುನಾಳ ಷರೀಫರ ಜಯಂತಿಯನ್ನು ಆಚರಿಸಿದರೆ ನಮ್ಮ ಸಂಪೂರ್ಣ ಬೆಂಬಲವಿರುತ್ತದೆ.ಅದನ್ನು ಬಿಟ್ಟು ಹಿಂದೂ ವಿರೋಧಿಯಾಗಿದ್ದ ಟಿಪ್ಪು ಜಯಂತಿ ಆಚರಿಸುತ್ತಿರುವುದು ಸರಿಯಲ್ಲ ಎಂದರು.