ಬೆಂಗಳೂರು, ಅ.30- ಬಿಬಿಎಂಪಿಗೆ ವಿವಿಧ ಇಲಾಖೆಗಳಿಂದ ಯರವಲು ಸೇವೆ ಮೇಲೆ ಬಂದಂತಹ ಅಧಿಕಾರಿಗಳು ಅದೆಂತಹ ಗಟ್ಟಿಚರ್ಮದವರೆಂದರೆ ಸರ್ಕಾರವೇ ಅವರನ್ನು ಮಾತೃ ಇಲಾಖೆಗೆ ಆದೇಶ ನೀಡಿದ್ದರೂ ಇನ್ನೂ ಇಲ್ಲೇ ಗೂಟ ಹೊಡೆದುಕೊಂಡು ಕೂತಿದ್ದಾರೆ.
ಹತ್ತು ಮಂದಿ ಕಾರ್ಯಪಾಲಕ ಅಭಿಯಂತರರು, 21 ಸಹಾಯಕ ಕಾರ್ಯಪಾಲಕ ಅಭಿಯಂತರರು ಸೇರಿ ಒಟ್ಟು 31 ಮಂದಿ ಅವಧಿ ಮುಗಿದಿದ್ದರೂ ಸರ್ಕಾರ ಆದೇಶ ಹೊರಡಿಸಿದ್ದರೂ ಇನ್ನೂ ಮಾತೃ ಇಲಾಖೆಗೆ ಹೋಗಿಲ್ಲ.
ಇವರುಗಳು ಸರ್ಕಾರದ ಆದೇಶಕ್ಕಾಗಲಿ, ಬಿಬಿಎಂಪಿ ಆಯುಕ್ತರ ಸೂಚನೆಗಾಗಲಿ ಕ್ಯಾರೇ ಅನ್ನದೆ ಇಲ್ಲೇ ಕುಳಿತಿದ್ದಾರೆ.ಕಾನೂನು ಪ್ರಕಾರ ಯಾವುದೇ ಅಧಿಕಾರಿಗಳು ಬಿಬಿಎಂಪಿಗೆ ಯರವಲು ಸೇವೆ ಮೇಲೆ ಬಂದರೆ ಮೂರು ವರ್ಷ ಮಾತ್ರ ಇಲ್ಲಿರಬೇಕು.ಆದರೆ, ಈ 31 ಮಂದಿ ಅಧಿಕಾರಿಗಳು ಬಂದು ಐದು ವರ್ಷಗಳಾಗಿವೆ.
ಸರ್ಕಾರದ ಆದೇಶವನ್ನು ದಿಕ್ಕರಿಸಿ ಪಾಲಿಕೆಯಲ್ಲೇ ಬೀಡು ಬಿಟ್ಟಿದ್ದಾರೆ.ಆದರೂ ಬಿಬಿಎಂಪಿ ಆಡಳಿತ ಇವರುಗಳಿಗೆ ವೇತನ ನೀಡುತ್ತಲೇ ಇದೆ.ಇದರಿಂದ ಪಾಲಿಕೆ ಖಜಾನೆಗೆ ನಷ್ಟವಾಗುತ್ತಲೇ ಇದೆ.
ವ್ಯಾಮೋಹ:
ಯರವಲು ಸೇವೆ ಮೇಲೆ ಬಂದ ಅಧಿಕಾರಿಗಳು ಯಾವುದೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಲು ಕೆಎಂಸಿ ಕಾಯ್ದೆಯಲ್ಲಿ ಅವಕಾಶವಿಲ್ಲ. ಪಾಲಿಕೆ ಆಯುಕ್ತರೂ ಕೂಡ ಕ್ರಮ ಕೈಗೊಳ್ಳಲಾಗುವುದಿಲ್ಲ. ಮಾತೃ ಇಲಾಖೆಗೆ ವರ್ಗಾವಣೆ ಮಾಡಬಹುದು. ಹಾಗಾಗಿ ಈ 31 ಮಂದಿ ತಮ್ಮ ಗಾಡ್‍ಫಾದರ್‍ಗಳ ಕೃಪಾಕಟಾಕ್ಷದಿಂದ ಇಲ್ಲೇ ಜಾಂಡಹೂಡಿದ್ದಾರೆ. ಅಂತಹ ವ್ಯಾಮೋಹ ಪಾಲಿಕೆಯಲ್ಲಿದೆ.
ಇಂತಹ ಬೇಜವಾಬ್ದಾರಿ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಎಂದು ಕಳೆದ ತಿಂಗಳೇ ಸರ್ಕಾರ ಆದೇಶಿಸಿತ್ತು.ಅದರಂತೆ ಆಯುಕ್ತರು ಕೂಡ 31 ಅಧಿಕಾರಿಗಳು ಮಾತೃ ಇಲಾಖೆಗೆ ಹೋಗುವಂತೆ ಸೂಚಿಸಿದ್ದರು.ಆದರೂ ಇವರು ಹೋಗಿಲ್ಲ.
ಆಕ್ರೋಶ:
ಬೇರೆ ಇಲಾಖೆಗಳಿಂದ ಯರವಲು ಸೇವೆ ಮೇಲೆ ಬಂದ ಈ ಅಧಿಕಾರಿಗಳು ಪಾಲಿಕೆಯನ್ನು ಲೂಟಿ ಮಾಡುತ್ತಿದ್ದಾರೆ.ಆದರೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟ ಮಾತೃ ಇಲಾಖೆಗೆ ಹೋಗುವಂತೆ ಹೇಳಿ ಕಣ್ಣೊರೆಸುವ ತಂತ್ರ ಅನುಸರಿಸಿದೆ.
ಈ ಅಧಿಕಾರಿಗಳು ನಡೆಸಿರುವ ಭ್ರಷ್ಟಾಚಾರದಲ್ಲಿ ಜೆಡಿಎಸ್-ಕಾಂಗ್ರೆಸ್ ಪಾಲ್ಗೊಂಡಿವೆ ಎಂದು ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕೂಡಲೇ ಯಾವ್ಯಾವ ಅಧಿಕಾರಿಗಳು ಯರವಲು ಸೇವೆ ಮೇಲೆ ಬಂದು ಅವದಿ ಮುಗಿದರೂ ಇಲ್ಲೇ ಇದ್ದಾರೋ ಇಂತಹವರನ್ನು ಕೂಡಲೇ ವಾಪಸ್ ಮಾತೃ ಇಲಾಖೆಗೆ ಕಳುಹಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಅವರು ಎಚ್ಚರಿಸಿದ್ದಾರೆ.
ಠಿಕಾಣಿ ಹೂಡಿರುವ ಅಧಿಕಾರಿಗಳು:
ಕಾರ್ಯಪಾಲಕ ಅಭಿಯಂತರರಾದ ಶೇಷಾದ್ರಿ, ಎಂ.ಸಿ.ಲಕ್ಷ್ಮೀಶ್, ಬಿ.ಎಸ್.ಮುಕುಂದ, ಎಂ.ಕೆಂಪೇಗೌಡ, ಕೆ.ಸಿ.ಉಮೇಶ್, ಮೋಹನ್‍ಗೌಡ, ಕೆ.ಎಂ.ವಾಸು, ಎಸ್.ಶಿವಕುಮಾರ್, ಎಂ.ಶಾಂತಕುಮಾರ್, ಆರ್.ಮಾಲತೇಶ್.
ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸಿ.ಟಿ.ಆಂಜನಪ್ಪ, ಬಿ.ಎ.ಮಹದೇವ್, ರಜನಿಕಾಂತ ಮಲ್ಲಿ, ಜಿ.ಡಿ.ಜಯರಾಮ್, ಜೆ.ಆರ್.ಭಾಸ್ಕರ್, ಆರ್.ಕೆ.ಶಶಿಧರ್, ಎಸ್.ಪಿ.ವಿಜಯಕುಮಾರ್, ಕೆ.ಸಿ.ಅಶ್ವಥರೆಡ್ಡಿ, ಅಂದನಾಗೌಡ ಸಿ.ಹಳೇಮನಿ, ಕೆ.ಎನ್.ರಮೇಶ್, ಮಹಮ್ಮದ್ ನಾಯಿಮ್ ತುಲ್ಲಾಖಾನ್, ಆರ್.ಎಸ್.ಪರಮೇಶ್, ಶಿವಲಿಂಗೇಗೌಡ, ಮಹಮ್ಮದ್ ಒಬೇದುಲ್ಲಾ ಶರೀಫ್, ಎಸ್.ಎಂ.ರಾಮಚಂದ್ರಮೂರ್ತಿ, ಆರ್.ಜಿ.ಪ್ರೇಮಾನಂದಕುಮಾರ್, ಆರ್.ವಿ. ವಿಜಯಗೋಪಾಲ್, ಮುಬಾಷೀರ್ ಅಹಮ್ಮದ್, ಸೀಮಾಬ್ ಅತ್ಥರ್, ಟಿ.ಕೃಷ್ಣಪ್ಪ, ಎ.ಸಿ.ರಾಜು.