ಬೆಂಗಳೂರು, ಅ.29- ನವೆಂಬರ್ ಒಂದರಂದು ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತ ರಾಜ್ಯ ನಿರ್ಮಾಣ ಘೋಷಣೆ ಸಂಬಂಧ ರಾಜ್ಯದಲ್ಲಿ ಯಾವ ರೀತಿಯ ಸಿದ್ಧತೆ ನಡೆದಿದೆ ಎಂಬ ಬಗ್ಗೆ ಇಂದು ಜಿಲ್ಲಾ ಪಂಚಾಯತ್‍ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಚಿವ ಕೃಷ್ಣಭೆರೇಗೌಡ ಸಂವಾದ ನಡೆಸಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ಕೈಗೊಂಡು ಜಿಲ್ಲಾ ಪಂಚಾಯತ್‍ಗಳ ಪ್ರಗತಿ ಪರಿಶೀಲನೆ ಹಾಗೂ ಶೌಚಾಲಯ ನಿರ್ಮಾಣದ ಮೂಲಕ ಬಯಲು ಶೌಚಾಲಯ ಮುಕ್ತ ರಾಜ್ಯಕ್ಕೆ ಕೈಗೊಂಡಿರುವ ಕ್ರಮಗಳ ಪ್ರಗತಿಯನ್ನು ಅವಲೋಕಿಸಲಾಯಿತು.
ಈ ಸಂದರ್ಭದಲ್ಲಿ ಸಚಿವರು, ಹೆಚ್ಚಿನ ಶೌಚಾಲಯ ನಿರ್ಮಾಣಕ್ಕೆ ಬೇಡಿಕೆ ಬಂದಲ್ಲಿ ಅದನ್ನು ಪರಿಗಣಿಸಿ ಸ್ಥಳೀಯ ಅಧಿಕಾರಿಗಳು ಕ್ರಮ ವಹಿಸಬೇಕು. ಇದಕ್ಕಾಗಿ ಕೇಂದ್ರದಿಂದ ಹೆಚ್ಚಿನ ಅನುದಾನ ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾವಾರು ವರದಿ ತಯಾರಿಸಿ ಕಳುಹಿಸಿದರೆ ಆ ಪಟ್ಟಿ ಅನುಸರಿಸಿ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.
ಒಣ ಕಸ ನಿರ್ವಹಣೆ ಸವಾಲು ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲೂ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳ ಒಣಕಸ ಹೆಚ್ಚಾಗಿರುವ ಕಡೆ ಅದರ ನಿರ್ವಹಣೆಗೆ ಬೇಡಿಕೆ ಬಂದಲ್ಲಿ ಅದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಪ್ರಸ್ತಾವನೆ ಕಳುಹಿಸುವಂತೆ ಆದೇಶಿಸಿದರು.