ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಜನಾರ್ಧನ ರೆಡ್ಡಿ ವಾಗ್ದಾಳಿ

ಬೆಂಗಳೂರು,ಅ.29- ಅಕ್ರಮ ಗಣಿಗಾರಿಕೆ ನಡೆಸಿರುವ ಶಾಸಕರಾದ ಆನಂದ್ ಸಿಂಗ್ ಮತ್ತು ನಾಗೇಂದ್ರರನ್ನು ಅಕ್ಕಪಕ್ಕದಲ್ಲಿ ಕೂರಿಸಿಕೊಂಡು ಗಣಿಗಾರಿಕೆ ಬಗ್ಗೆ ಮಾತನಾಡುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾನ ಮರ್ಯಾದೆ ಕಿಂಚಿತ್ತಾದರೂ ಇದೆಯೇ ಎಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ಇಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.

ನನ್ನ ಹೆಸರಿನಲ್ಲಿ ಆನಂದ್ ಸಿಂಗ್ ಮತ್ತು ಬಿ.ನಾಂಗೇಂದ್ರ ಅಕ್ರಮ ಗಣಿಗಾರಿಕೆ ನಡೆಸಿರುವುದು ಸಾಬೀತಾಗಿದೆ. ಹಿಂದೆ ಅಂಥವರನ್ನು ಜೈಲಿಗೆ ಹೋಗಿ ಬಂದವರೆಂದು ಟೀಕೆ ಮಾಡುತ್ತಿದ್ದ ಸಿದ್ದರಾಮಯ್ಯ ಇಂದು ಅವರನ್ನೇ ಅಕ್ಕಪಕ್ಕ ಕೂರಿಸಿಕೊಂಡು ಮಾತನಾಡುತ್ತಾರೆ. ಅವರಿಗೆ ನಾಚಿಕೆಯಾಗುವುದಿಲ್ಲವೇ ಎಂದು ರೆಡ್ಡಿ ಟೀಕಾ ಪ್ರಹಾರ ನಡೆಸಿದರು.

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಹಾನಗಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ತಮ್ಮ ಆತ್ಮೀಯ ಗೆಳೆಯ ಶ್ರೀರಾಮುಲು ಅವರ ಸಹೋದರಿ ಜೆ.ಶಾಂತ ಅವರನ್ನು ಉಪಚುನಾವಣೆಯಲ್ಲಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮಾಧ್ಯಮಗಳ ಮೂಲಕವೇ ಜಿಲ್ಲೆಯ ಜನತೆಗೆ ಮನವಿ ಮಾಡಿದರು.

ನಾನು ಅಕ್ರಮ ಗಣಿಗಾರಿಕೆ ನಡೆಸಿದ್ದೇನೆಂದು ಕಾಂಗ್ರೆಸಿಗರು ಅಪಪ್ರಚಾರ ನಡೆಸಿದರು. ಒಂದು ಲಕ್ಷ ಕೋಟಿ ಬೊಕ್ಕಸಕ್ಕೆ ನಷ್ಟ ಮಾಡಿದ್ದೇನೆ ಎಂದು ದೂರಿದರು. ಎಸ್‍ಐಟಿಯಲ್ಲಿ 50 ಸಾವಿರ ಕೋಟಿ ನಷ್ಟವಾಗಿದೆ ಎಂದು ಹೇಳಲಾಗಿತ್ತು. ಒಂದು ಲಕ್ಷ ಕೋಟಿ ವಸೂಲಿ ಮಾಡುವುದಾಗಿ ಇದೇ ಸಿದ್ದರಾಮಯ್ಯ ಹೇಳಿದ್ದರು. ನನ್ನಿಂದ ಒಂದು ಲಕ್ಷ ಕೋಟಿ ಇರಲಿ ಒಂದು ಕೋಟಿಯನ್ನೂ ಸಹ ವಸೂಲಿ ಮಾಡಲು ಅವರಿಗೆ ಸಾಧ್ಯವಾಯಿತೇ ಎಂದು ಪ್ರಶ್ನಿಸಿದರು.

ಸತ್ಯ ಶೋಧನ ಸಮಿತಿ ರಚನೆ ಮಾಡಿ ಸುಳ್ಳು ಆರೋಪಗಳ ಮೂಲಕ ನನಗೆ ನಾಲ್ಕೂವರೆ ವರ್ಷ ಜೈಲಿನಲ್ಲಿ ಸಿಲುಕುವಂತೆ ಮಾಡಿದರು. ನಾನು ಅಕ್ರಮ ಗಣಿಗಾರಿಕೆ ನಡೆಸಿದ್ದೇನೆ ಎಂದು ಯಾವ ನ್ಯಾಯಾಲಯದಲ್ಲೂ ಸಾಬೀತಾಗಿಲ್ಲ. ಸಿದ್ದರಾಮಯ್ಯ ನಮಗೆ ಎಷ್ಟೆಲ್ಲ ತೊಂದರೆ ಕೊಟ್ಟರೂ ನಾವು ತಲೆಕೆಡಿಸಿಕೊಂಡಿಲ್ಲ. ಚಾಮುಂಡೇಶ್ವರಿ ಜನತೆ ಅವರಿಗೆ ಎಂಥ ಪಾಠ ಕಲಿಸಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ನ್ಯಾಯಾಲಯದ ಆದೇಶದ ಅನ್ವಯ ನಾನು ಬಳ್ಳಾರಿಗೆ ಹೋಗುವಂತಿಲ್ಲ. ದೇವರು ಹೇಗೆ ಬರೆದಿದ್ದಾನೋ ಹಾಗೆಯೇ ಆಗುತ್ತದೆ. ನಾನು ಜಿಲ್ಲೆಗೆ ಹೋಗದಿದ್ದರೂ ಚಿಂತೆ ಇಲ್ಲ. ಜಿಲ್ಲೆಯ ಮತದಾರರು ಬಿಜೆಪಿಗೆ ಮತ ಹಾಕಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದರು.
ನನ್ನನ್ನು ಭ್ರಷ್ಟ ಎಂದಿರುವ ಸಿದ್ದರಾಮಯ್ಯನವರಿಗೆ ನಾಚಿಕೆಯಾಗಬೇಕು. ದೆಹಲಿಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ನನ್ನ ಮನೆಯಲ್ಲೇನಾದರೂ ಸಿಬಿಐ ಅಧಿಕಾರಿಗಳಿಗೆ ಹಣ ಸಿಕ್ಕಿದೆಯೇ? ನನ್ನ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಶ್ರೀರಾಮುಲು ಏಕಾಂಗಿ ಅಲ್ಲ:
ಉಪಚುನಾವಣೆಯಲ್ಲಿ ಶ್ರೀರಾಮುಲು ಏಕಾಂಗಿಯಾಗಿ ಚುನಾವಣೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ರಾಮುಲು ಅವರನ್ನು ಬಳ್ಳಾರಿ ಜನತೆ ಬೆಳೆಸಿದ್ದಾರೆ. ಅವರನ್ನು ಕ್ಷೇತ್ರದ ಜನತೆ ಎಂದೂ ಕೈ ಬಿಡುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದರು.
ಸಹೋದರಿ ಶಾಂತ ಸ್ಪರ್ಧಿಸಿದ್ದರೂ ಅವರ ಪರವಾಗಿ ಪ್ರಚಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ನೋವಿದೆ. ದೇವರು ನನ್ನ ಹಣೆಬರಹದಲ್ಲಿ ಏನು ಬರೆದಿದ್ದಾನೋ ಅದೇ ಆಗುತ್ತದೆ. ಇಂದಲ್ಲ, ನಾಳೆ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.

ಈ ಹಿಂದೆ ರಾಮುಲು ಸಚಿವರಾಗಿದ್ದ ವೇಳೆ 108 ಆ್ಯಂಬುಲೆನ್ಸ್ ಜಾರಿ ಮಾಡುವ ಮೂಲಕ ಕರ್ನಾಟಕದ ಜನತೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಶ್ರೀರಾಮುಲು ಎಂದರೆ ಅಭಿವೃದ್ದಿ ಎಂಬುದು ಎಲ್ಲರಿಗೂ ಗೊತ್ತು. ಮನೆ ಮಗ ಮತ್ತು ಮನೆ ಮಗಳನ್ನು ಎಂದಿಗೂ ಕೈ ಬಿಡುವುದಿಲ್ಲ ಎಂದರು.
ರಾಮುಲು 420 ಎಂದು ಸಿದ್ದರಾಮಯ್ಯ ಇಡೀ ವಾಲ್ಮೀಕಿ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ವಾಲ್ಮೀಕಿ ಜಯಂತಿಯಂದು ಮುಖ್ಯಮಂತ್ರಿ ಅನಾರೋಗ್ಯದ ಕಾರಣ ಕಾರ್ಯಕ್ರಮಕ್ಕೆ ಗೈರು ಹಾಜರಾದರು. ಕಡೆ ಪಕ್ಷ ಉಪಮುಖ್ಯಮಂತ್ರಿಯಾದರೂ ಕಾರ್ಯಕ್ರಮಕ್ಕೆ ಬರಬಹುದಿತ್ತಲ್ಲವೇ? ವಾಲ್ಮೀಕಿ ಸಮುದಾಯವನ್ನೇ ಅವಮಾನಿಸುವ ಮೂಲಕ ಅಪಮಾನ ಮಾಡಿದಾರೆ ಎಂದು ಕಿಡಿಕಾರಿದರು.

ಉಪಚುನಾವಣೆ ನಡೆಯಲು ರಾಮುಲು ಕಾರಣ ಎಂದು ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಅವರು ಚುನಾವಣೆಗೆ ನಿಂತಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದ್ದರಿಂದ ರಾಜೀನಾಮೆ ನೀಡಿದ್ದಾರೆ. ಶ್ರೀರಾಮುಲು ಅವರು ಬಳ್ಳಾರಿಯನ್ನು ಅಭಿವೃದ್ದಿ ಮಾಡಿಲ್ಲ ಎಂದು ಆರೋಪಿಸುತ್ತಿರುವ ಸಿದ್ದರಾಮಯ್ಯ ನನ್ನ ಮುಂದೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಕಳೆದ ಏಳು ವರ್ಷಗಳಿಂದ ನನಗೆ ರಕ್ಷಣೆ ಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರೂ ರಕ್ಷಣೆ ಕೊಡಲಿಲ್ಲ. ನಾನು ಯಾರಿಗೂ ಹೆದರುವವನಲ್ಲ. ಜೀವನದಲ್ಲಿ ಏನು ಬಂದಿದೆಯೋ ಅದನ್ನು ಹೆದರಿಸುತ್ತೇನೆ. ತಲೆ ತಗ್ಗಿಸುವ ಪ್ರಶ್ನೆಯೇ ಇಲ್ಲ ಎಂದು ರೆಡ್ಡಿ ಗುಡುಗಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ