ಬೆಂಗಳೂರು,ಅ.29-ಅಂಬೇಡ್ಕರ್ ಸೇನೆ ವತಿಯಿಂದ ದಲಿತರ ಮೂಲಭೂತ ಹಕ್ಕುಗಳಿಗಾಗಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆಯನ್ನು ಇದೇ 31ರಂದು ಬೆಳಗ್ಗೆ 9.30ಕ್ಕೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೇನೆಯ ರಾಜ್ಯಾಧ್ಯಕ್ಷ ಪಿ.ಮೂರ್ತಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಯ ಅಂಗವಾಗಿ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಕಾಲ್ನಡಿಗೆ ಮೂಲಕ ಫ್ರೀಡಂಪಾರ್ಕ್ಗೆ ತೆರಳಿ ಅಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು, ಎಸ್ಸಿಎಸ್ಟಿ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ದೊರಕಿಸಿಕೊಡಬೇಕು, ಬ್ಯಾಕ್ಲಾಕ್ ಹುದ್ದೆಗಳನ್ನು ಭರ್ತಿ ಮಾಡಬೇಕು, ಕೊಡುಗು ಜಿಲ್ಲೆಯಲ್ಲಿ ಆದ ಅನಾಹುತದಲ್ಲಿ ಮನೆ ಕಳೆದುಕೊಂಡ ಜನರ ಪೈಕಿ ಪರಿಶಿಷ್ಟ ಜನಾಂಗದವರಿಗೆ ಪ್ರತ್ಯೇಕ ನಿವೇಶನ ಕಲ್ಪಿಸಿಕೊಡಬೇಕು ಸೇರಿದಂತೆ 12 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಪರಮಪೂಜ್ಯ ಶ್ರೀ ನಿಜಗುಣನಂದ ಸ್ವಾಮೀಜಿ, ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ನಟ ಚೇತನ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಸಿ.ಎಸ್.ದ್ವಾರಕನಾಥ್ ಸೇರಿದಂತೆ ರಾಜ್ಯದ 30 ಜಿಲ್ಲೆಗಳಿಂದ ಸುಮಾರು 8 ಸಾವಿರ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.