
ನವದೆಹಲಿ: ಇಂಡೋನೆಷ್ಯಾ ರಾಜಧಾನಿಯಿಂದ ಪಾಂಗ್ಕಲ್ ಪಿನಾಗ್ ದ್ವೀಪಕ್ಕೆ 188 ಜನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಲಯನ್ ಏರ್ ಬೋಯಿಂಗ್ 737 ವಿಮಾನ ಸೋಮವಾರ ಬೆಳಿಗ್ಗೆ ಪತನಗೊಂಡಿದೆ. ಈ ವಿಮಾನದ ಪೈಲಟ್ ಭಾರತೀಯ ಮೂಲದ ಭಾವೇ ಸುನ್ಯೆಜ್ ಎಂದು ಗುರುತಿಸಲಾಗಿದೆ.
ಭಾವೇ ಸುನ್ಯೆಜ್ ನವದೆಹಲಿ ಮೂಲದವರಾಗಿದ್ದು, ಇಲ್ಲಿಯ ಮಯೂರ ವಿಹಾರದಲ್ಲಿ ಅವರ ಮನೆಯಿದ್ದು, ಅಹ್ಲಕಾನ್ ಪಬ್ಲಿಕ್ ಸ್ಕೂಲ್ನಲ್ಲಿ ವಿದ್ಯಾಭ್ಯಾಸವನ್ನು ಮಾಡಿದ್ದರು. ಇವರು ಮಾರ್ಚ್ 2011 ರಿಂದ ಲಯನ್ ಏರ್ಲೈನ್ಸ್ ಗೆ ಕ್ಯಾಪ್ಟನ್ ಸೇವೆ ಸಲ್ಲಿಸುತ್ತಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ನಮ್ಮ ಅಧಿಕಾರಿಗಳು ವಿಮಾನದ ಅವಶೇಷಗಳನ್ನು ಹುಡುಕುತ್ತಿದ್ದಾರೆ. ಈ ವಿಮಾನವು ಪಾಂಗ್ಕಲ್ ಪಿನಾಗ್ ದ್ವೀಪಕ್ಕೆ ಹೋಗು ಮಾರ್ಗದಲ್ಲಿ ಬೆಳಿಗ್ಗೆ 6.30ಕ್ಕೆ ಅದು ವಾಯು ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಂಡು ಸಮುದ್ರದಲ್ಲಿ ಪತನಗೊಂಡಿತು. ವಿಮಾನದಲ್ಲಿದ್ದ ಪ್ರಯಾಣಿಕರ ಗತಿ ಏನಾಗಿದೆ ಎಂಬುದು ನಮಗೆ ಗೊತ್ತಿಲ್ಲ. ನಾವು ಅವರಿಗಾಗಿ ಪ್ರಾರ್ಥಿಸುತ್ತೇವೆ ಎಂದು ರಕ್ಷಣಾ ಎಜೆನ್ಸಿಯ ವಕ್ತಾರ ಯೂಸುಫ್ ಲತೀಫ್ ತಿಳಿಸಿದ್ದಾರೆ.
ಲಯನ್ ಏರ್ ಫ್ಲೈಟ್ ವಿಮಾನದ ಗತಿ ಏನಾಗಿದೆ ಎಂದು ಕೇಳಲಾದ ಪ್ರಶ್ನೆಗೆ ಇಂಡೋನೇಷ್ಯಾ ವಾಯುಯಾನ ಪ್ರಾಧಿಕಾರದ ವಕ್ತಾರ ಯೂಸುಫ್ ಲತೀಫ್ ಅವರು ವಿಮಾನ ಪತನಗೊಂಡಿರುವುದು ದೃಢ ಪಟ್ಟಿದೆ ಎಂದು ಲಿಖೀತ ಸಂದೇಶದಲ್ಲಿ ತಿಳಿಸಿದರು
ದೂರ ಸಮುದ್ರದಲ್ಲಿರುವ ತೈಲ ಸಂಸ್ಕರಣ ಘಟಕದ ಆಸುಪಾಸಿನಲ್ಲಿ ಸಮುದ್ರದಲ್ಲಿ ನತದೃಷ್ಟ ವಿಮಾನದ ಆಸನಗಳ ಸಹಿತ ವಿವಿಧ ಬಗೆಯ ಅವಶೇಷಗಳು ತೇಲುತ್ತಿರುವುದು ಕಂಡು ಬಂದಿರುವುದಾಗಿ ಸುದ್ದಿ ಸಂಸ್ಥೆ ಹೇಳಿದೆ.