ಬೆಂಗಳೂರು, ಅ.29- ಅನ್ನಬ್ರಹ್ಮರೂಪ ಜೇ ಜೀವನ ಹೇತು ಕಾರಣ ಎಂಬ ಸಂಸ್ಕøತ ಶ್ಲೋಕದಂತೆ ಹಸಿವು ನೀಗಿಸಲು ಅನ್ನ ಸಾಕು, ಅಹಂಕಾರಕ್ಕಾಗಿ ಅಲ್ಲ, ಶೋಕಿಗಾಗಿ ಬೂರಿ ಭೋಜನ ಮಾಡಿ ಭಾರೀ ನಷ್ಟ ಮಾಡುವುದನ್ನು ಬಿಬಿಎಂಪಿ ನೂತನ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ತಪ್ಪಿಸಿದ್ದಾರೆ.
ಬಿಬಿಎಂಪಿ ಸದಸ್ಯರಿಗೆ ಇನ್ನು ಮುಂದೆ ಮಾಸಿಕ ಸಭೆಯಲ್ಲಿ ಇಂದಿರಾ ಕ್ಯಾಂಟಿನ್ ಊಟ. ಮೇಯರ್ ಕೈಗೊಂಡಿರುವ ನಿರ್ಣಯ ಇಂದಿನಿಂದ ಜಾರಿ.
ಇಂದು ನಡೆದ ಮಾಸಿಕ ಸಭೆಯಲ್ಲಿ ಎಲ್ಲ ಸದಸ್ಯರಿಗೆ ಇಂದಿರಾ ಕ್ಯಾಂಟಿನ್ ಊಟವನ್ನು ಸರಬರಾಜು ಮಾಡಲಾಯಿತು. ಸಾಮಾನ್ಯ ಇಂದಿರಾ ಕ್ಯಾಂಟಿನ್ ಊಟದಂತೆ ಇರಲಿಲ್ಲ. ಕೊಂಚ ವಿಶೇಷವಾಗಿತ್ತು. ಅನ್ನ-ಸಾಂಬಾರು, ಪಲ್ಯ, ಉಪ್ಪಿನಕಾಯಿ, ರಾಯತ, ಶಾವಿಗೆ ಪಾಯಸ ಇಷ್ಟನ್ನು ಇಂದಿರಾ ಕ್ಯಾಂಟಿನ್ಗಳಿಗಾಗಿ ಅಡುಗೆ ತಯಾರಿಸಿ ಸರಬರಾಜು ಮಾಡುವ ನೀಲಸಂದ್ರನಿಂದ ದೊಡ್ಡ ದೊಡ್ಡ ಬಾಕ್ಸ್ಗಳಲ್ಲಿ ತರಲಾಗಿತ್ತು.
ಆದರೆ, ಸದಸ್ಯರಿಂದ ನಿರ್ಲಕ್ಷ್ಯ, ಬಹುತೇಕ ಸದಸ್ಯರು ಇಂದಿರಾ ಕ್ಯಾಂಟಿನ್ ಊಟದ ಕಡೆ ತಲೆ ಹಾಕಲಿಲ್ಲ. ಮಾಸಿಕ ಸಭೆಯ ಮಧ್ಯಾಹ್ನದ ಊಟವೆಂದರೆ ಮುಗಿ ಬೀಳುತ್ತಿದ್ದ ಸದಸ್ಯರು, ಅಧಿಕಾರಿಗಳು, ಸಹಾಯಕರು, ಚಾಲಕರು, ಸಿಬ್ಬಂದಿಗಳು ಇಂದು ಆ ಕಡೆ ತಲೆ ಹಾಕಲಿಲ್ಲ. ಇಂದಿರಾ ಕ್ಯಾಂಟಿನ್ ಊಟವೆಂದು ಅಸಡ್ಡೆ ಮಾಡಿದರೆಂದು ಕಾಣುತ್ತದೆ.
ಕೊಂಚ ವಿಶೇಷ ಊಟ ತರಿಸಿದ್ದರೂ ಕೂಡ ಬಹುತೇಕರು ಆ ಕಡೆ ಬರಲಿಲ್ಲ. ಆಯುಕ್ತರು, ಮೇಯರ್, ಒಂದಷ್ಟು ಸದಸ್ಯರು ಮಾತ್ರ ಬಂದು ಊಟ ಮಾಡಿದರು ಅಷ್ಟೇ. ಉಳಿದಂತೆ ಯಾರೂ ಬರಲಿಲ್ಲ.
ನಿಮಗೊಂದು ತಿಳಿದಿರಲಿ, ಬಿಬಿಎಂಪಿಯಲ್ಲಿ ನಡೆಯುವ ಮಾಸಿಕ ಸಭೆ ಸಂದರ್ಭದಲ್ಲಿ ತರಹೇವಾರಿ ಬೂರಿ ಭೋಜನಕ್ಕೆ ಲಕ್ಷಾಂತರ ರೂ. ವೆಚ್ಚವಾಗುತ್ತಿತ್ತು. ಸಸ್ಯಹಾರಿ, ಮಾಂಸಹಾರಿ ಭೋಜನದ ವ್ಯವಸ್ಥೆ ಇರುತ್ತಿತ್ತು.
ಎಲ್ಲ ಸದಸ್ಯರು, ಅಧಿಕಾರಿಗಳು, ಸಹಾಯಕರು, ಸಂಬಂಧಿಕರು, ಮಾಧ್ಯಮದವರು ಸೇರಿದಂತೆ ನೂರಾರು ಜನರಿಗೆ ಇಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು. ಇದಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಬೇಕಿತ್ತು. ಇದು ತೀವ್ರ ಆಕ್ಷೇಪಕ್ಕೂ ಕಾರಣವಾಗಿತ್ತು. ಈ ಖರ್ಚನ್ನು ತಗ್ಗಿಸುವ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟಿನ್ ಊಟವನ್ನು ಎಲ್ಲರಿಗೂ ನೀಡಲು ನಿರ್ಧರಿಸಲಾಗಿದೆ.
ಅಲ್ಲದೆ, ಇಂದಿರಾ ಕ್ಯಾಂಟಿನ್ ಊಟ-ತಿಂಡಿಯ ಗುಣಮಟ್ಟ ಆಕ್ಷೇಪಕ್ಕೆ ಕಾರಣವಾಗಿತ್ತು. ಪ್ರತಿಪಕ್ಷಗಳು ಇಂದಿರಾ ಕ್ಯಾಂಟಿನ್ನಲ್ಲಿ ಊಟದ ಗುಣಮಟ್ಟವನ್ನು ಆಕ್ಷೇಪಿಸಿದ್ದವು. ಇದೇ ಊಟವನ್ನು ಏಕೆ ಎಲ್ಲರಿಗೂ ಸರಬರಾಜು ಮಾಡಬಾರದು ಎಂದು ಹೇಳಿದ್ದರು. ಅಲ್ಲದೆ, ನೂತನ ಮೇಯರ್ ಅವರು ಕೂಡ ಇಂದಿರಾ ಕ್ಯಾಂಟಿನ್ನಲ್ಲಿ ಉತ್ತಮ ಊಟ ಸರಬರಾಜಾಗುತ್ತಿದೆ. ಪ್ರಥಮ ಮಾಸಿಕ ಸಭೆಯಲ್ಲಿಯೇ ಇಂದಿರಾ ಕ್ಯಾಂಟಿನ್ನಿಂದಲೇ ಊಟ ತರಿಸಿ ಎಲ್ಲರಿಗೂ ನೀಡಲಾಗುವುದು ಎಂದು ಹೇಳಿದ್ದರು.
ಅದರಂತೆ ಇಂದಿನಿಂದ ಇಂದಿರಾ ಕ್ಯಾಂಟಿನ್ನಿಂದ ಬಿಸಿ ಬಿಸಿ ಊಟ ಬಂದಿತ್ತು. ಪೌರ ಕಾರ್ಮಿಕರಿಗೆ, ಬಡವರಿಗೆ 10ರೂ.ನಲ್ಲಿ ಸಿಗುತ್ತಿದ್ದ ಇಂದಿರಾ ಕ್ಯಾಂಟಿನ್ ಊಟ ಪುರಪಿತೃಗಳಿಗೂ ನೀಡಲಾಗುತ್ತಿರುವುದು ಅತ್ಯಂತ ವಿಶೇಷ. ನೂತನ ಮೇಯರ್ ಅವರ ಈ ಕ್ರಮ ಸ್ವಾಗತಾರ್ಹವಾಗಿದೆ ಎಂದು ಹಲವರು ಪ್ರಶಂಸಿಸುತ್ತಿದ್ದುದು ಕಂಡುಬಂತು.
ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು ಪೌರ ಕಾರ್ಮಿಕರಿಗೆ, ಜನಸಾಮಾನ್ಯರಿಗೆ ನೀಡುವಂತಹ ಊಟವನ್ನೇ ಬಿಬಿಎಂಪಿ ಸಭೆಗೆ ತರಿಸಬೇಕು. ವಿಶೇಷವಾಗಿ ತಯಾರಿಸಬಾರದು ಎಂದು ಹೇಳಿದ್ದರು. ಆದರೆ, ಇಂದು ತರಿಸಿದ್ದ ಊಟ ಸ್ವಲ್ಪ ವಿಶೇಷವಾಗಿದ್ದಂತೆ ಇತ್ತು. ಆದರೂ ಖರ್ಚು ಸಾಕಷ್ಟು ಕಡಿಮೆಯಾಗಿತ್ತು. ಒಂದು ಊಟಕ್ಕೆ 500 ರಿಂದ 600ರೂ. ಖರ್ಚು ಮಾಡುವ ಕಡೆ ಕೇವಲ 10 ರಿಂದ 20ರೂ. ಖರ್ಚು ಮಾಡುವುದರಲ್ಲಿ ತಪ್ಪೇನಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಅಲ್ಲದೆ, ಇಂದಿರಾ ಕ್ಯಾಂಟಿನ್ ಊಟ ಎಲ್ಲರಿಗೂ ಒಂದೇ ಆಗಿರಬೇಕು.
ಸಭೆ ಪ್ರಾರಂಭಕ್ಕೂ ಮುನ್ನ ಇಂದಿರಾ ಕ್ಯಾಂಟಿನ್ ಊಟದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಹಲವು ಸದಸ್ಯರು ಇಂದಿರಾ ಕ್ಯಾಂಟಿನ್ ಊಟ ಬರುತ್ತದೆ, ಹೇಗಿದೆ ಸ್ವಲ್ಪ ಟೇಸ್ಟ್ ನೋಡೋಣ ಎಂದು ಮಾತನಾಡಿಕೊಳ್ಳುತ್ತಿದ್ದರೆ, ಮತ್ತೆ ಕೆಲವು ಸದಸ್ಯರು ಆ ಊಟ ತಿನ್ನುವ ದರ್ದು ನಮಗೇನಿದೆ, ನಾವು ಹೊರಗಡೆ ಹೋಗಿ ಊಟ ಮಾಡೋಣ ಎಂದು ಮಾತನಾಡಿಕೊಳ್ಳುತ್ತಿದ್ದುದು ಕೇಳಿಬಂತು.
ಒಟ್ಟಾರೆ ಸರ್ಕಾರ ಮಹತ್ವಾಕಾಂಕ್ಷೆಯಿಂದ ಸ್ಥಾಪಿಸಿದ ಇಂದಿರಾ ಕ್ಯಾಂಟಿನ್ ಸಾರ್ವಜನಿಕವಾಗಿ ಅದೆಷ್ಟು ಜನಪ್ರಿಯಗೊಂಡಿದೆಯೋ ಗೊತ್ತಿಲ್ಲ. ಇಂದಂತೂ ಬಿಬಿಎಂಪಿಯಲ್ಲಿ ಸದ್ದು ಮಾಡಿತ್ತಾದರೂ ಬಹುತೇಕರು ಊಟ ಮಾಡದಿರುವುದು ವಿಪರ್ಯಾಸ.