ಟೊಕಿಯೋ: ಮುಂಬರುವ ದಿನಗಳಲ್ಲಿ ಭಾರತ ಎಲೆಕ್ಟ್ರಾನಿಕ್ಸ್ ಹಾಗೂ ಆಟೋ ಮೊಬೈಲ್ ಉತ್ಪಾದನೆಗಳ ಹಬ್ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಎರಡನೇ ದಿನವಾದ ಇಂದು ಟೊಕಿಯೋದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾದಿದರು. ಭಾರತ ಮುಂದಿನ ದಶಕದಲ್ಲಿ ಜಾಗತಿಕ ಆರ್ಥಿಕತೆಯ ಬೆಳವಣಿಗೆಯಲ್ಲಿ ತನ್ನ ಪಯಣ ವೇಗವಾಗಿ ಮುಂದುವರಿಸಲಿದೆ. ಜಪಾನ್ ನಲ್ಲಿರುವ ಭಾರತೀಯ ಸಮುದಾಯದವರು ನವ ಭಾರತ ನಿರ್ಮಾಣಕ್ಕೆ ಸಕ್ರಿಯವಾಗಿ ಕೊಡುಗೆ ನೀಡುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಡಿಜಿಟಲ್ ಮೂಲಭೂತ ಸೌಕರ್ಯಗಳಲ್ಲಿ ಇಂದು ಭಾರತ ಮಹತ್ವಪೂರ್ಣ ಬೆಳವಣಿಗೆಗಳನ್ನು ಕಾಣುತ್ತಿದೆ. ಅಂತರ್ಜಾಲ ಸಂಪರ್ಕ ಭಾರತದಲ್ಲಿ ಇಂದು ಹಳ್ಳಿ ಹಳ್ಳಿಗೆ ತಲುಪುತ್ತಿದೆ. 100 ಕೋಟಿಗೂ ಅಧಿಕ ಮೊಬೈಲ್ ಫೋನ್ ಭಾರತದಲ್ಲಿ ಸಕ್ರಿಯವಾಗಿದೆ. ಇಂದು 1 ಜಿಬಿ ಡಾಟಾ ಒಂದು ಬಾಟಲ್ ತಂಪು ಪಾನೀಯಗಿಂತ ಕಡಿಮೆಯಿದೆ. ಇಂದು ಸೇವೆಯನ್ನು ಒದಗಿಸಲು ಡಾಟಾ ಒಂದು ಪ್ರಮುಖ ಸಾಧನವಾಗಿದೆ ಎಂದು ತಿಳಿಸಿದರು.
ಮೇಕ್ ಇನ್ ಇಂಡಿಯಾ ಇಂದು ಜಾಗತಿಕ ಬ್ರ್ಯಾಂಡ್ ಆಗಿ ಹೊರಹೊಮ್ಮುತ್ತಿದೆ. ನಾವು ಇಂದು ಗುಣಮಟ್ಟದ ಪದಾರ್ಥಗಳನ್ನು ತಯಾರು ಮಾಡುತ್ತಿದ್ದೇವೆ. ಅದು ನಮ್ಮ ದೇಶಕಷ್ಟೇ ಸೀಮಿತವಾಗಿಲ್ಲ. ವಿಶ್ವ ಮಟ್ಟದಲ್ಲೂ ಮೇಕ್ ಇನ್ ಇಂಡಿಯಾಗೆ ಮಾರುಕಟ್ಟೆಯಿದೆ. ಭಾರತ ಇಂದು ಜಾಗತಿಕ ಕೇಂದ್ರ ಸ್ಥಾನವಾಗುತ್ತಿದ್ದು, ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೊಬೈಲ್ ತಯಾರಿಕೆಯಲ್ಲಿ ವಿಶ್ವವೇ ನಮ್ಮತ್ತ ತಿರುಗಿ ನೋಡುತ್ತಿದೆ. ಮೊಬೈಲ್ ತಯಾರಿಕೆಯಲ್ಲಿ ಭಾರತ ನಂ.1 ಆಗುವತ್ತ ದಾಪುಗಾಲು ಇಡುತ್ತಿದೆ ಎಂದು ಹೇಳಿದರು.
ನಮ್ಮ ನಾಲ್ಕು ವರ್ಷಗಳ ಆಡಳಿತದಲ್ಲಿ ಭಾರತ ಬೃಹತ್ ರೂಪಾಂತರ ಹಂತದಲ್ಲಿ ಸಾಗುತ್ತಿದೆ. ತನ್ನ ನೀತಿ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಮಾಡುತ್ತಿರುವ ಕೆಲಸಗಳಿಗೆ ರಾಷ್ಟ್ರವನ್ನು ಇಂದು ವಿಶ್ವದ ಬೇರೆ ದೇಶಗಳು ಗೌರವಿಸಿ ಕೊಂಡಾಡುತ್ತಿವೆ ಎಂದರು.
ಹಣಕಾಸಿನ ಒಳಹರಿವಿಕೆಗೆ ಭಾರತದ ಮಾದರಿಗಳಾದ ಜನ ಧನ ಯೋಜನೆ, ಮೊಬೈಲ್, ಆಧಾರ್, ಪಾವಿತ್ರ್ಯತೆ ಮತ್ತು ಡಿಜಿಟಲ್ ಮಾದರಿ ವಹಿವಾಟು ಇತ್ಯಾದಿಗಳನ್ನು ಇಂದು ವಿಶ್ವವೇ ಕೊಂಡಾಡುತ್ತಿದೆ. ಭಾರತದಲ್ಲಿ ಇಂದು ಟೆಲಿ ಕಮ್ಯುನಿಕೇಶನ್ ಮತ್ತು ಅಂತರ್ಜಾಲ ಸಂಪರ್ಕ ವ್ಯವಸ್ಥೆ ಕೂಡ ವಿಸ್ತಾರವಾಗಿದೆ ಎಂದು ಶ್ಲಾಘಿಸಿದರು.