ನಾಗಮಂಗಲ, ಅ.29-ಮೈತ್ರಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶವ್ಯಕ್ತಪಡಿಸಿ ಗದ್ದಲ ಮಾಡಿದಾಗ ಮೈಕ್ ಎಸೆದು ಮತ್ತೆ ದೇವೇಗೌಡರ ವಿರುದ್ಧ ಮಾಜಿ ಸಚಿವ ಚಲುವರಾಯಸ್ವಾಮಿ ಕಿಡಿಕಾರಿದ ಪ್ರಸಂಗ ನಡೆಯಿತು.
ಮಂಡ್ಯ ಲೋಕಸಭೆ ಉಪಚುನಾವಣಾ ಪ್ರಚಾರಕ್ಕಾಗಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಚಿವ ಚಲುವರಾಯಸ್ವಾಮಿ ಕರೆಯಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಮೈತ್ರಿ ಸರ್ಕಾರದ ಜೆಡಿಎಸ್ ವಿರುದ್ದ ತೀವ್ರ ಆಕ್ರೋಶವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಕೇಸ್ ಹಾಕಿಸಿ ಕಿರುಕುಳ ನೀಡಲಾಗುತ್ತಿದೆ, ಸರ್ಕಾರದ ಸೌಲಭ್ಯಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ, ಎಂದು ಮೈತ್ರಿ ವಿರುದ್ಧ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶವ್ಯಕ್ತಪಡಿಸಿ ಚಲುವರಾಯಸ್ವಾಮಿಯೊಂದಿಗೆ ವಾಗ್ವಾದಕ್ಕಿಳಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ತೀವ್ರ ಗದ್ದಲ ಉಂಟಾಗಿ ತೀವ್ರ ಕೋಪಗೊಂಡ ಚಲುವರಾಯಸ್ವಾಮಿ ಕೈಯಲ್ಲಿದ್ದ ಮೈಕ್ ಎಸೆದು ತಾವೂ ಕೂಡ ದೇವೇಗೌಡರ ವಿರುದ್ದ ಆಕ್ರೋಶವ್ಯಕ್ತಪಡಿಸಿದರು ಮತ್ತು ಪಕ್ಷದ ಸೂಚನೆಯಂತೆ ನಾವು ತಾಳ್ಮೆಯಿಂದ ನಡೆದುಕೊಳ್ಳೋಣ ಎಂದು ಕಾರ್ಯಕರ್ತರಿಗೆ ಸಮಾಧಾನ ಹೇಳಿದರು.
ನನ್ನ ರಾಜಕೀಯಕ್ಕೆ ದೇವೇಗೌಡರೇ ಅಡ್ಡಗಾಲು;ಸಿಆರ್‍ಎಸ್
ಈ ವೇಳೆ ಮಾಜಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ನಾನು ಜೆಡಿಎಸ್ ಪಕ್ಷದಲ್ಲಿದ್ದ ಪ್ರಾರಂಭದ ಕಾಲದಲ್ಲೆ ದೇವೇಗೌಡರು ನನ್ನ ರಾಜಕೀಯ ಬೆಳವಣಿಗೆಗೆ ತೀವ್ರ ಅಡ್ಡಿಯಾಗಿದ್ದವರು,ಈ ಪರಿಸ್ಥಿತಿಯನ್ನು ಎದುರಿಸಿಕೊಂಡೇ ನಾನು ರಾಜಕೀಯವಾಗಿ ಎತ್ತರಕ್ಕೆ ಬೆಳೆದು ಬಂದವನು. ನಮ್ಮ ನಾಯಕರಾದ ಸಿದ್ದರಾಮಯ್ಯನವರು ಈ ಚುನಾವಣೆ ಬಳಿಕ ಮೈಸೂರು ಬಾಗದ ಕಾರ್ಯಕರ್ತರಿಗಾಗುತ್ತಿರುವ ಕಿರುಕುಳದ ವಿಚಾರವಾಗಿ ಪ್ರತ್ಯೇಕ ಸಭೆ ಕರೆದು ಸರಿಪಡಿಸುವುದಾಗಿ ಹೇಳಿದ್ದಾರೆ. ಇದಾಗದಿದ್ದರೆ ಇನ್ನೂ ಮೇ ತಿಂಗಳಲ್ಲೆ ಮತ್ತೊಂದು ಚುನಾವಣೆ ಎದುರಾಗಲಿದೆ ಎಂದು ನೆನಪಿಸಿದರು.
ಅಂಬರೀಶ್ ಕುಟುಕಿದ ಶಿವರಾಮೇಗೌಡ
ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಶಿವರಾಮೇಗೌಡ ಕಾಂಗ್ರೇಸ್ ಕಾರ್ಯಕರ್ತರ ಸಭೆಗೆ ಆಗಮಿಸಿ ಮತಯಾಚನೆ ಮಾಡಿದ ಅವರು ಮೈತ್ರಿ ಧರ್ಮ ಪಾಲಿಸುವುದು ನಮ್ಮ ಧರ್ಮ,ಈ ಚುನಾವಣೆ ಬಳಿಕ ಮೈತ್ರಿ ಧರ್ಮದಂತೆ ನಡೆದುಕೊಳ್ಳಲು ನಾವು ಬದ್ದವಾಗಿದ್ದೇವೆ,ದಯಮಾಡಿ ಈ ಬಾರಿ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಚುನಾವಣಾ ಜಿಲ್ಲಾ ಉಸ್ತುವರಿ ಬಲರಾಮು,ವೀಕ್ಷಕರಾದ ಸಂಪಂಗಿ,ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿಡಿ ಗಂಗಾಧರ್,ತಾಲ್ಲೂಕು ಅಧ್ಯಕ್ಷ ರಾಜೇಶ್,ಹಾಗೂ ಹೆಚ್.ಟಿ.ಕೃಷ್ಣೇಗೌಡ,ಹನುಮಂತು,ಪ್ರಸನ್ನ,ರಾಜೇಗೌಡ ಇತರರು ಇದ್ದರು.