ಬಾಗಲಕೋಟೆ,ಅ.29- ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದರೆ ಸರ್ಕಾರ ಉಳಿಯಲಿದೆ ಎಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದಿಂದಲೇ ರಾಜ್ಯ ರಾಜಕಾರಣ ತೀರ್ಮಾನವಾಗುತ್ತದೆ ಎಂಬುದು ನಿಜವಾದರೆ ನಾವು ಅಲ್ಲಿ ನೂರಕ್ಕೆ ನೂರಷ್ಟು ಗೆಲ್ಲಲಿದ್ದೇವೆ. ಅಲ್ಲಿಗೆ ಸರ್ಕಾg ಉಳಿಯುವುದಿಲ್ಲ ಎಂಬುದು ಕುಮಾರಸ್ವಾಮಿ ಅವರ ಮಾತಿನಿಂದಲೇ ನಿಜವಾಗುತ್ತದೆ ಅಲ್ಲವೇ ಎಂದು ವ್ಯಂಗ್ಯವಾಡಿದರು.
ಯಾವುದೇ ಕಾರಣಕ್ಕೂ ಶಿವಮೊಗ್ಗದಲ್ಲಿ ಜೆಡಿಎಸ್ ಗೆಲ್ಲುವುದಿಲ್ಲ. ಅಲ್ಲಿನ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೆಚ್ಚು ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂಬದಷ್ಟೇ ಬಾಕಿಯಿದೆ. ಕುಮಾರಸ್ವಾಮಿ ಹೋದ ತಕ್ಷಣ ಜನ ಮರಳಾಗುತ್ತಾರೆಯೇ ಎಂದು ಪ್ರಶ್ನಿಸಿದರು.
ಐದು ಕ್ಷೇತ್ರಗಳ ಉಪಚುನಾವಣೆಯಲ್ಲೂ ಬಿಜೆಪಿ ಗೆಲ್ಲಲಿದೆ. ಶಿವಮೊಗ್ಗ, ಬಳ್ಳಾರಿ ಹಾಗೂ ಜಮಖಂಡಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಈಗಾಗಲೇ ಗೆದ್ದಾಗಿದೆ. ನಮ್ಮ ಗಮನವಿರುವುದು ರಾಮನಗರ ಮತ್ತು ಮಂಡ್ಯ ಕ್ಷೇತ್ರಗಳು ಮಾತ್ರ ಎಂದರು.
ತಿರುಗೇಟು:
ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಿದರೆ ಯಡಿಯೂರಪ್ಪ ಓಡಿಹೋಗಿ ದೇವೇಗೌಡರ ತೊಡೆಯ ಮೇಲೆ ಕೂರುತ್ತಾರೆ ಎಂಬ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆಗೆ ಬಿಎಸ್‍ವೈ ತಿರುಗೇಟು ನೀಡಿದರು.
ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿ ಒಬ್ಬ ಜವಾಬ್ದಾರಿಯುತವಾಗಿ ಮಾತನಾಡುವುದನ್ನು ಮರೆತು ಹಲವು ದಿನಗಳವಾಗಿವೆ. ಇತ್ತೀಚೆಗೆ ತಲೆತಿರುಕನಂತೆ ಮಾತನಾಡುತ್ತಿದ್ದಾರೆ. ಅಂಥವರ ಬಗ್ಗೆ ಮಾತನಾಡಿರುವುದೇ ಒಳಿತು ಎಂದು ಹರಿಹಾಯ್ದರು.
ನಾನೇಕೆ ಜೆಡಿಎಸ್ ಜೊತೆ ಸಂಬಂಧ ಬೆಳೆಸಲಿ. ನನ್ನ ಬೆಂಬಲ ಪಡೆದುಕೊಂಡು ಕುಮಾರಸ್ವಾಮಿ 20 ತಿಂಗಳು ಮುಖ್ಯಮಂತ್ರಿಯಾಗಿದ್ದರು. ಅಪ್ಪ-ಮಕ್ಕಳು ಸೇರಿಕೊಂಡು ನನಗೆ ಟೋಪಿ ಹಾಕಿರುವಾಗ ಮತ್ತೆ ಅವರ ಜೊತೆ ಸಂಬಂಧ ಬೆಳೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಈ ಜನ್ಮದಲ್ಲಿ ಜೆಡಿಎಸ್ ಜೊತೆ ಸಂಬಂಧ ಬೆಳೆಸುವುದಿಲ್ಲ. ಎಂಥ ಸಂದರ್ಭ ಬಂದರೂ ಅಪ್ಪ-ಮಕ್ಕಳ ಜೊತೆ ಕೈ ಜೋಡಿಸುವುದಿಲ್ಲ. ದಿನೇಶ್ ಗುಂಡೂರಾವ್ ಮುಂದಿನ ದಿನಗಳಲ್ಲಾದರೂ ಜವಾಬ್ದಾರಿಯುತವಾಗಿ ಮಾತನಾಡಲಿ. ಒಬ್ಬರ ಬಗ್ಗೆ ಟೀಕೆ ಮಾಡುವಾಗ ನಾಲಿಗೆಯನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕು. ಅಡ್ಡಾದಿಡ್ಡಿ ಮಾತನಾಡಿದರೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.