ಬೆಂಗಳೂರು,ಅ.29- ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 1.85 ಲಕ್ಷ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ನ.30ರೊಳಗೆ ಈಡೇರಿಸದಿದ್ದರೆ ಮುಷ್ಕರ ನಡೆಸಿ ಉಗ್ರ ಹೋರಾಟ ಮಾಡುವುದಾಗಿ ಬಿಎಸ್ಎನ್ಎಲ್ ಆಲ್ ಯೂನಿಯನ್ಸ್ ಅಂಡ್ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ಗುಂಡಣ್ಣ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೌಕರರ ವೇತನ ಹಾಗೂ ಪಿಂಚಣಿ ಪರಿಷ್ಕರಣೆ, ನೇರನೇಮಕಾತಿಯಾದ ನೌಕರರಿಗೆ ಶೇ.30ರ ನಿವೃತ್ತಿ ಸವಲತ್ತುಗಳು, ಬಿಎಸ್ಎನ್ಎಲ್ಗೆ 4ಜಿ ತರಂಗಾಂತರ ಹಂಚಿಕೆ ಹಾಗೂ ಮೂಲ ವೇತನದ ಮೇಲೆ ಮಾತ್ರ ಪಿಂಚಣಿ ದೇಣಿಗೆ ಕಡಿತ ಮಾಡಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಹೇಳಿದರು.
ಈ ಎಲ್ಲಾ ಬೇಡಿಕೆಗಳ ಬಗ್ಗೆ ದೂರ ಸಂಪರ್ಕ ಇಲಾಖೆಯ ರಾಜ್ಯ ಸಚಿವ ಮನೋಜ್ ಸಿನ್ಹಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿತ್ತು. ಬೇಡಿಕೆಗಳನ್ನು ಈಡೇರಿಸುವುದಾಗಿ ಅವರು ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಬೇಡಿಕೆ ಈಡೇರಿಲ್ಲ. ಹಾಗಾಗಿ ಹೋರಾಟಕ್ಕೆ ಕರೆ ನೀಡಬೇಕಾಗಿದೆ ಎಂದು ತಿಳಿಸಿದರು.
ಹಲವು ಹಂತಗಳಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಇಂದು ದೇಶಾದ್ಯಂತ ಸಂಘಟನೆಯ ಪ್ರಮುಖರು ಪತ್ರಿಕಾಗೋಷ್ಠಿ ನಡೆಸಿ ನೌಕರರಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಮಾಧ್ಯಮಗಳ ಮೂಲಕ ಸರ್ಕಾರದ ಗಮನಕ್ಕೆ ತರಲಾಗುತ್ತಿದೆ. ನಾಳೆ ರಾಷ್ಟ್ರಾದ್ಯಂತ ನೌಕರರು ಧರಣಿ ನಡೆಸಲಿದ್ದು, ನ.14ರಂದು ರಾಷ್ಟ್ರವ್ಯಾಪಿ ರ್ಯಾಲಿ ನಡೆಸಲಾಗುವುದು ಎಂದು ವಿವರಿಸಿದರು.
ಇಷ್ಟಾದರೂ ಬೇಡಿಕೆ ಈಡೇರದಿದ್ದರೆ ನ.30ರ ನಂತರ ಮುಷ್ಕರ ಸೇರಿದಂತೆ ತೀವ್ರ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕೃಷ್ಣರೆಡ್ಡಿ, ಜಗದಾಲ್, ಎಸ್.ಕೆ.ಹಿರೇಮಠ್, ಅಶೋಕ್, ಪ್ರಸಾದ್, ಮೋಹನ್, ಮುನಿರಾಜು ಮತ್ತಿತರರು ಹಾಜರಿದ್ದರು.