ಬೆಂಗಳೂರು, ಅ.29- ಇತ್ತೀಚೆಗೆ ನಿಧನರಾದ ಉಪಮೇಯರ್ ರಮಿಳಾ ಉಮಾಶಂಕರ್ ಅವರಿಗೆ ಬಿಬಿಎಂಪಿ ಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಇದೇ ಪ್ರಥಮ ಬಾರಿಗೆ ಉಪಮೇಯರ್ ಅವರ ನಿಧನದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಮೊದಲ ಸಭೆ ಇದಾಗಿರುವುದು ವಿಧಿ ವಿಪರ್ಯಾಸವಾಗಿದೆ.
ರಮಿಳಾ ಉಮಾಶಂಕರ್ ಅವರು ಉಪಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಅಕಾಲಿಕ ನಿಧನರಾಗಿದ್ದು, ಅವರ ಸ್ಥಾನಕ್ಕೆ ಇನ್ನೂ ಯಾರೂ ನೇಮಕವಾಗಿಲ್ಲ. ಇಂದು ಮಾಸಿಕ ಸಭೆ ನಡೆಯುತ್ತಿದೆ. ಸಾಮಾನ್ಯವಾಗಿ ಮೇಯರ್-ಉಪಮೇಯರ್ ಸಭೆಯಲ್ಲಿ ಉಪಸ್ಥಿತರಿರಬೇಕು. ಆದರೆ, ಉಪಮೇಯರ್ ಇಲ್ಲದೆ ನಡೆಯುತ್ತಿರುವ ಸಭೆ ಇದಾಗಿದೆ.
ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಆಡಳಿತ ಪಕ್ಷದ ನಾಯಕ ಶಿವರಾಜ್, ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಮಾಜಿ ಮೇಯರ್ಗಳಾದ ಕಟ್ಟೆ ಸತ್ಯನಾರಾಯಣ್, ಮಂಜುನಾಥರೆಡ್ಡಿ, ಪದ್ಮಾವತಿ, ಮುಖಂಡರಾದ ಉಮೇಶ್ಶೆಟ್ಟಿ, ಲಲಿತಾ ತಿಮ್ಮನಂಜಯ್ಯ ಸೇರಿದಂತೆ ಪಕ್ಷಭೇದ ಮರೆತು ಸದಸ್ಯರು ರಮಿಳಾ ನಿಧನಕ್ಕೆ ಸಂತಾಪ ಸೂಚಿಸಿ, ಮೃತರ ಗುಣಗಾನ ಮಾಡಿದರು.
ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಮಾತನಾಡಿ, ರಮಿಳಾ ಅವರ ಅಕಾಲಿಕ ನಿಧನ ನಮಗೆಲ್ಲರಿಗೂ ದುಃಖ ತರಿಸಿದೆ. ಜನಾಭಿಮುಖಿ, ಸಮಾಜಮುಖಿಯಾಗಿದ್ದ ಅವರು ಇಷ್ಟು ಬೇಗ ನಮ್ಮನ್ನಗಲುತ್ತಾರೆಂದು ಅಂದುಕೊಂಡಿರಲಿಲ್ಲ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು.
ಮಾಜಿ ಮೇಯರ್ ಪದ್ಮಾವತಿ ಮಾತನಾಡಿ, ರಮಿಳಾ ಉಮಾಶಂಕರ್ ಅವರು ಮಹತ್ವಾಕಾಂಕ್ಷಿ, ಆಶಾವಾದಿಯಾಗಿದ್ದರು. ತಾನೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವಂತಾಯಿತು. ಅವರ ಹೆಸರನ್ನು ನಾವು ಚಿರಸ್ಥಾಯಿಗೊಳಿಸಬೇಕಿದೆ. ಹಾಗಾಗಿ ಅವರ ಹೆಸರನ್ನು ಕಾವೇರಿಪುರ ವಾರ್ಡ್ನ ರಸ್ತೆ, ವೃತ್ತ ಅಥವಾ ಪಾರ್ಕ್ಗೆ ಇಡಬೇಕೆಂದು ಮನವಿ ಮಾಡಿದರು.
ಉಮೇಶ್ಶೆಟ್ಟಿ ಮಾತನಾಡಿ, ಅವರು ಬೇರೆ ಪಕ್ಷದವರಾದರೂ ನಮ್ಮ ವಿಧಾನಸಭಾ ಕ್ಷೇತ್ರದ ಒಂಬತ್ತು ಜನ ಸದಸ್ಯರು, ನಾವೆಲ್ಲ ಒಟ್ಟಾಗಿದ್ದೆವು. ರಸ್ತೆ ಅಥವಾ ವೃತ್ತಕ್ಕೆ ಅವರ ಹೆಸರಿಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕೆಂದು ಹೇಳಿದರು.
ಅವರ ಆಪ್ತರಾದ ಲಲಿತಾ ತಿಮ್ಮನಂಜಯ್ಯ ಅವರಂತೂ ಮಾತನಾಡುವಾಗ ಗದ್ಗದಿತರಾದರು. 20 ವರ್ಷಗಳಿಂದ ನಮಗೆ ಆತ್ಮೀಯರಾಗಿದ್ದರು. ಉಪಮೇಯರ್ ಆಗಿ ಒಂದು ವಾರದಲ್ಲಿಯೇ ಅವರು ನಮ್ಮನ್ನಗಲಿದ್ದು ಅತ್ಯಂತ ನೋವು ತರಿಸಿದೆ ಎಂದು ತೀವ್ರ ಶೋಕ ವ್ಯಕ್ತಪಡಿಸಿದರು. ಸಭೆಯಲ್ಲಿ ಪಕ್ಷಾತೀತವಾಗಿ ಮೃತರ ಗುಣಗಾನ ಮಾಡಲಾಯಿತು.
ಕೊನೆಯಲ್ಲಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮಾತನಾಡಿ, ರಮಿಳಾ ಉಮಾಶಂಕರ್ ಅವರು ಜನಪರ ಧೋರಣೆಗಳನ್ನು ಹೊಂದಿದ್ದರು. ಅವರ ಅಕಾಲಿಕ ನಿಧನದಿಂದ ಶೂನ್ಯ ಆವರಿಸಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಹೇಳಿದರು.
ಮೃತರ ಗೌರವಾರ್ಥ ಸಭೆಯಲ್ಲಿ ಒಂದು ನಿಮಿಷ ಮೌನ ಆಚರಿಸಿ ಸಭೆಯನ್ನು 31ಕ್ಕೆ ಮುಂದೂಡಲಾಯಿತು.