ಝಾನ್ಸಿ:ಅ-29: 6 ತಿಂಗಳ ಮಗುವನ್ನು ಕಛೇರಿಯಲ್ಲಿಯೇ ಮಲಗಿಸಿಕೊಂಡು ಡ್ಯೂಟಿ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಅಧಿಕಾರಿ ಅರ್ಚನಾ ಜಯಂತ್ ಅವರನ್ನು ಅವರ ತವರಿಗೆ ವರ್ಗಾವಣೆ ಮಾಡಲಾಗಿದೆ.
ಉತ್ತರ ಪ್ರದೇಶದ ಝಾನ್ಸಿಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿರುವ 30 ವರ್ಷದ ಅರ್ಚನಾ ಜಯಂತ್ ಮಗುವನ್ನು ಕಚೇರಿ ಡೆಸ್ಕ್ ಮೇಲೆ ಮಲಗಿಸಿಕೊಂಡು, ಕೆಲಸ ನಿರ್ವಹಿಸುತ್ತಿದ್ದರು. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅರ್ಚನಾ ಅವರ ಪರಿಶ್ರಮವನ್ನು ಕಂಡ ಡಿಜಿಪಿ, ಅರ್ಚಾನಾ ಅವರಿಗೆ ಅನುಕೂಲವಾಗುವಂತೆ ಅವರ ತವರು ಆಗ್ರಾಗೆ ವರ್ಗಾವಣೆ ಮಾಡಿದ್ದಾರೆ.
ಆಗ್ರಾ ಮೂಲದವರಾಗಿರುವ ಅರ್ಚನಾ ಝಾನ್ಸಿಯ ಕೊತ್ವಾಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರ ಪೋಷಕರು ಆಗ್ರಾದಲ್ಲಿಯೇ ನೆಲೆಸಿದ್ದಾರೆ. ಪತಿ ಗುರುಗ್ರಾಮದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅನಿವಾರ್ಯವಾಗಿ 6 ತಿಂಗಳ ಮಗುವನ್ನು ಕಚೇರಿಗೆ ಕರೆತಂದು ಅರ್ಚನಾ ಆರೈಕೆ ಮಾಡುತ್ತಿದ್ದರು. ಫೋಟೋ ವೈರಲ್ ಆದಂತೆ ಉತ್ತರ ಪ್ರದೇಶದ ಡಿಜಿಪಿ ಓಂ ಪ್ರಕಾಶ್ ಸಿಂಗ್ ಅವರ ಗಮನಕ್ಕೆ ಬಂದಿದ್ದು, ತಕ್ಷಣ ಅರ್ಚನಾ ಅವರನ್ನು ಆಗ್ರಾಗೆ ವರ್ಗಾವಣೆ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಡಿಜಿಪಿ ಓಂ ಪ್ರಕಾಶ್ ಸಿಂಗ್, ಮಗು ಆರೈಕೆ ಮಾಡುತ್ತಿರುವ ಸಿಬ್ಬಂದಿ ಚಿತ್ರವನ್ನು ನಾನು ನೋಡಿದ್ದು, ಅವರ ಕತೆ ಕೇಳಿ, ಅರ್ಚನಾ ಓರ್ವ ಪರಿಶ್ರಮಿ ಎಂದು ತಿಳಿದು ತಕ್ಷಣ ಝಾನ್ಸಿಯ ಐಜಿ ಅವರನ್ನು ಸಂಪರ್ಕಿಸಿ ಆಕೆಗೆ ಅನುಕೂಲವಾಗುಂತೆ ಆಗ್ರಾಗೆ ವರ್ಗಾವಣೆ ಮಾಡಿದೆ ಎಂದು ತಿಳಿಸಿದ್ದಾರೆ.