ಮುಂಬೈ: ಭಾರತದ ಪ್ರತಿಷ್ಠಿತ ಕಂಪನಿ ಟಾಟಾ ಗ್ರೂಪ್ನ ಬ್ರ್ಯಾಂಡ್ ಸಲಹೆಗಾರರಾಗಿದ್ದ ಸುಹೇಲ್ ಸೇಥ್ ವಿರುದ್ಧ ಮೀ ಟೂ ಆರೋಪಗಳು ಕೇಳಿಬಂದಿದ್ದು, ಹಲವು ಮಹಿಳೆಯರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಈ ಹಿನ್ನೆಲೆಯಲ್ಲಿ ಸುಹೇಲ್ರನ್ನು ಟಾಟಾ ಗ್ರೂಪ್ ಕೆಲಸದಿಂದ ಕೈಬಿಟ್ಟಿದೆ.
ಕಂಪನಿ ಅಸೋಸಿಯೇಷನ್ ಜತೆ ಚರ್ಚಿಸಿದ ನಂತರ ಸೇಥ್ ಅವರನ್ನು ಒಪ್ಪಂದದಿಂದ ಕೈಬಿಡಲು ನಿರ್ಧರಿಸಿರುವುದಾಗಿ ಟಾಟಾ ಗ್ರೂಪ್ ತಿಳಿಸಿದೆ. ಟಾಟಾ ಸನ್ಸ್ನೊಂದಿಗೆ ಸೇಥ್ ಸಂಸ್ಥೆಯ ಒಪ್ಪಂದ ನವೆಂಬರ್ 30, 2018ರಂದು ಕೊನೆಗೊಳ್ಳಲಿದೆ ಎಂದು ಕಂಪನಿಯು ಹೇಳಿದೆ.
ಸೇಥ್ ಅವರು ಟಾಟಾ ಗ್ರೂಪ್ನ ಸಾರ್ವಜನಿಕ ಸಂಪರ್ಕ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು. ಟಾಟಾ ಗ್ರೂಪ್ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿಯ ಅವಧಿಯಲ್ಲಿ ಕಂಪನಿ ಮೇಲೆ ಬೀರಿದ್ದ ಕಹಿ ಪರಿಣಾಮವನ್ನು ತೊಡೆದುಹಾಕಿ, ಕಂಪನಿಯ ಹೆಸರನ್ನು ಕಾಪಾಡಿದ ಹೆಗ್ಗಳಿಕೆಯನ್ನು ಸುಹೇಲ್ ಹೊಂದಿದ್ದಾರೆ. ಸೇಥ್ ಅವರು ಲೇಖಕರಲ್ಲದೆ, ಅಂಕಣಕಾರರೂ ಆಗಿದ್ದಾರೆ.
ಸೇಥ್ ವಿರುದ್ಧ ಮಾಡೆಲ್ ಡೈಯಾಂಡ್ರ ಸೋರ್ಸ್, ಬರಹಗಾರ್ತಿ ಇರಾ ತ್ರಿವೇದಿ ಹಾಗೂ ನಿರ್ದೇಶಕಿ ನತಾಶ ರಾಥೋಡ್ ಸೇರಿದಂತೆ 6 ಮಹಿಳೆಯರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಈ ಹಿನ್ನಲೆಯಲ್ಲಿ ಸುಹೇಲ್ ರನ್ನು ಕಂಪನಿಯ ಒಪ್ಪಂದದಿಂದ ಕೈಬಿಟ್ಟಿದೆ.