ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆಯೇ ಬಿಜೆಪಿ ರಾಷ್ಟ್ರಾಧ್ಯಕ್ಷ…?

ತಿರುವನಂತಪುರಂ: ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ನೀಡಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಬೆಂಬಲ ವ್ಯಕ್ತಪಡಿಸಿರುವ ಬಿಜೆಪಿ ಈಗ ಪ್ರತಿಭಟನಾಕಾರರ ಪರ ನಿಂತಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಶಬರಿಮಲೆ ಮಂಡಲ ಪೂಜಾ ಕೈಂಕರ್ಯದ ಸಂದರ್ಭದಲ್ಲಿ ಅಮಿತ್ ಶಾ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ನವೆಂಬರ್ 17ರಿಂದ ಶಬರಿಮಲೆಯ ಮಂಡಲ ಪೂಜಾ ಕೈಂಕರ್ಯಗಳು ಪ್ರಾರಂಬವಾಗಲಿದೆ. ಈ ವೇಳೆ ಅಮಿತ್ ಶಾ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಕೇರಳ ಬಿಜೆಪಿ ತಿಳಿಸಿದೆ.

ಶಬರಿಮಲೆ ಭಕ್ತಾದಿಗಳ ವಿರುದ್ಧ ಕೇರಳ ಸರ್ಕಾರ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳ ಕುರಿತಂತೆ ಇತ್ತೀಚೆಗೆ ಮಾತನಾಡಿದ್ದ ಶಾ ಇದು “ತುರ್ತು ಪರಿಸ್ಥಿತಿ”ಯನ್ನು ನೆನಪಿಸುವಂತಾ ಕ್ರಮ ಎಂದು ವಾಗ್ದಾಳಿ ನಡೆಸಿದ್ದರು. ಸುಪ್ರೀಂ ಆದೇಶ ಜಾರಿಗೆ ಮುಂದಾಗಿರುವ ಸಿಪಿಎಂ-ನೇತೃತ್ವ ಎಡಪಂಥೀಯ ಪ್ರಜಾಸತ್ತಾತ್ಮಕ ಸರ್ಕಾರದ ನಿರ್ಧಾರದ ವಿರುದ್ಧ ಅಯ್ಯಪ್ಪ ಭಕ್ತರಿಗೆ ಬಿಜೆಪಿ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದು, ಈಗ ಅಮಿತ್ ಶಾ ಶಬರಿಮಲೆಗೆ ಬೇಟಿ ನೀಡಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ