ಪಾಣಿಪತ್: ತಾಯಿಯೊಂದಿಗೆ ಮನೆಯಲ್ಲಿ ಮಲಗಿದ್ದ ಬಾಲಕಿಯನ್ನು ಮಧ್ಯರಾತ್ರಿ ವೇಳೆ ಎಳೆದೊಯ್ದು ಗ್ಯಾಂಗ್ ರೇಪ್ ನಡೆಸಿರುವ ಘೋರ ಘಟನೆ ಪಾಣಿಪತ್ನ ಸೋನಾಲಿಯಲ್ಲಿ ನಡೆದಿದೆ.
ಕಳೆದ ಗುರುವಾರ ರಾತ್ರಿ ಊಟ ಮುಗಿಸಿದ ಸಂತ್ರಸ್ತೆ ತನ್ನ ಮೂವರು ಸಹೋದರಿಯರು ಹಾಗೂ ತಾಯಿಯೊಂದಿಗೆ ಮನೆಯಲ್ಲಿ ಮಲಗಿದ್ದರು. ಒಂದೇ ಕೊಠಡಿಯಲ್ಲಿ ಪ್ರತ್ಯೇಕ ಮಂಚದಲ್ಲಿ ಐವರು ಮಲಗಿದ್ದರು.
ಸುಮಾರು 11 ಗಂಟೆ ಸಮಯದಲ್ಲಿ ಬಂದ ಆರೋಪಿಗಳು ಕೌಂಪಂಡ್ ಜಿಗಿದು ಮನೆಗೆ ನುಗ್ಗಿ ಕೊಠಡಿಯಲ್ಲಿ ನಿದ್ರೆಗೆ ಜಾರಿದ್ದ ಬಾಲಕಿಯ ಬಾಯಿ ಮುಚ್ಚಿ, ಆಕೆಯನ್ನು ಮನೆಯಿಂದಾಚೆ ಮೈದಾನಕ್ಕೆ ಎಳೆದುಕೊಂಡು ಹೋಗಿದ್ದಾರೆ. ಬಳಿಕ ಇಬ್ಬರು ಆರೋಪಿಗಳಾದ ಹಶಿಮ್ ಮತ್ತು ಇಶ್ರಾರ್ ಜತೆ ಇನ್ನೂ 6 ಜನ ಕಾಮುಕರು ಸೇರಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ಮಧ್ಯ ರಾತ್ರಿ ಎರಡು ಗಂಟೆಯ ಬಳಿಕ ಬಾಲಕಿಯನ್ನು ಮನೆಯ ಹೊರಭಾಗದಲ್ಲಿ ಬಿಟ್ಟು ಯಾರಿಗೂ ಹೇಳದಂತೆ ಬೆದರಿಕೆಯೊಡ್ಡಿ ಪರಾರಿಯಾಗಿದ್ದಾರೆ.
ಸಂತ್ರಸ್ತೆ ತನಗಾದ ಅನ್ಯಾಯವನ್ನು ತಾಯಿಯ ಬಳಿ ಹೇಳಿಕೊಂಡಿದ್ದಾಳೆ. ಘಟನೆಯಿಂದ ದಿಗ್ಭ್ರಮೆಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ವಿಷಯ ತಿಳಿದ ಆರೋಪಿಗಳು ಸಂತ್ರಸ್ತೆಯ ಮನೆಗೆ ನುಗ್ಗಿ ದೂರು ದಾಖಲಿಸದಂತೆ ಆಕೆಯ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ಆದರೂ ಹೆದರದೆ ಕುಟುಂಬ ಆಕೆಯನ್ನು ಠಾಣೆಗೆ ಕರೆದೊಯ್ದು ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.