ಬೆಂಗಳೂರು, ಅ.28- ರಾಜ್ಯದ ವಿಧಾನಸಭೆ ಹಾಗೂ ಲೋಕಸಭೆ ಉಪ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರತೊಡಗಿದ್ದು, ರಾಜಕೀಯ ಪಕ್ಷಗಳ ನಾಯಕರು ಚುನಾವಣಾ ಪ್ರಚಾರವನ್ನು ತೀವ್ರಗೊಳಿಸಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಸಚಿವರು, ಶಾಸಕರು ಹಾಗೂ ರಾಜಕೀಯ ಪಕ್ಷಗಳ ನಾಯಕರು ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿದಿದ್ದು, ತಮ್ಮ ಅಭ್ಯರ್ಥಿಗಳ ಗೆಲುವಿಗೆ ತಂತ್ರ, ಪ್ರತಿತಂತ್ರ ನಡೆಸುವುದರ ಜೊತೆಗೆ ಮತದಾರರ ಓಲೈಕೆಗೆ ನಾನಾ ರೀತಿಯ ಕರಸತ್ತನ್ನು ನಡೆಸುತ್ತಿದ್ದಾರೆ. ರೋಡ್ ಶೋ, ಬಹಿರಂಗ ಪ್ರಚಾರ, ಆಯಾ ಪಕ್ಷಗಳ ಮುಖಂಡರ ಸಭೆ ಸೇರಿದಂತೆ ಹಲವು ರೀತಿಯ ಪ್ರಚಾರತಂತ್ರಗಳನ್ನು ಅನುಸರಿಸುತ್ತಿದ್ದಾರೆ.
ನವೆಂಬರ್ 3ರಂದು ನಡೆಯುವ 2 ವಿಧಾನಸಭೆ ಹಾಗೂ 3 ಲೋಕಸಭಾ ಚುನಾವಣಾ ಪ್ರಚಾರದಲ್ಲಿ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರವನ್ನು ಕೈಗೊಂಡು ಆರೋಪ-ಪ್ರತ್ಯಾರೋಪಗಳಲ್ಲಿ ನಿರತರಾಗಿದ್ದಾರೆ.
ಲಂಡನ್ ಪ್ರವಾಸದಿಂದ ಮರಳಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಇಂದು ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಇಂದು ಮಧ್ಯಾಹ್ನ ಕ್ಷೇತ್ರದ ಹಳ್ಳಿಮಾಳ, ರಾಮನಗರ ಟೌನ್ ಸೇರಿದಂತೆ ವಿವಿಧೆಡೆಗಳಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಒಮ್ಮತದ ಅಭ್ಯರ್ಥಿಯಾಗಿರುವ ಅನಿತಾ ಕುಮಾರಸ್ವಾಮಿ ಪರವಾಗಿ ಸಂಸದ ಡಿ.ಕೆ.ಸುರೇಶ್ ಅವರು ಕೂಡ ನಿರಂತರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದು,ಇಂದು ಕೂಡ ಕ್ಷೇತ್ರದಲ್ಲಿ ಮತಯಾಚನೆ ಮಾಡಿದರು. ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ರಾಮನಗರದ ಚೆನ್ನಮಾನಹಳ್ಳಿಯಲ್ಲಿ ಅನಿತಾ ಕುಮಾರಸ್ವಾಮಿ ಪರವಾಗಿ ಇಂದು ಬಿರುಸಿನ ಪ್ರಚಾರ ನಡೆಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಿರಾಳಕೊಪ್ಪದಲ್ಲಿ ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಮಧು ಬಂಗಾರಪ್ಪ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಶಿವಮೊಗ್ಗ ಕ್ಷೇತ್ರದಲ್ಲೇ ಬೀಡುಬಿಟ್ಟು, ಕ್ಷೇತ್ರದ ವಿವಿಧೆಡೆ ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಲಿದ್ದಾರೆ.
ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಮಧು ಬಂಗಾರಪ್ಪ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರೆ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರವಾಗಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಪರವಾಗಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಹರಿಹಾಯುತ್ತಿರುವ ಬಿಜೆಪಿ ನಾಯಕರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಕ್ಷೇತ್ರದಲ್ಲಿ ಮತಯಾಚನೆ ಕಾರ್ಯ ತೀವ್ರಗೊಳಿಸಿದ್ದಾರೆ.
ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ವಿಧಾನಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಅವರ ಪರವಾಗಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಉಭಯ ಪಕ್ಷಗಳ ನಾಯಕರು ಮತಯಾಚನೆಯಲ್ಲಿ ತೊಡಗಿದ್ದಾರೆ.
ಪ್ರತಿಷ್ಠೆಯಾಗಿ ಈ ಕ್ಷೇತ್ರವನ್ನು ಪರಿಗಣಿಸಿರುವ ಮೈತ್ರಿ ಪಕ್ಷಗಳು ತಮ್ಮ ಅಭ್ಯರ್ಥಿಯ ಪರವಾಗಿ ಪ್ರಚಾರವನ್ನು ತೀವ್ರಗೊಳಿಸಿದ್ದು, ಚುನಾವಣಾ ತಂತ್ರ, ಪ್ರತಿತಂತ್ರಗಳನ್ನು ಸ್ಥಳೀಯ ನಾಯಕರೊಡಗೂಡಿ ರೂಪಿಸತೊಡಗಿದ್ದಾರೆ.
ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರ ದಂಡೇಬೀಡುಬಿಟ್ಟಿದ್ದು, ಸ್ಥಳೀಯ ನಾಯಕರನ್ನು ಒಳಗೊಂಡ ಪಕ್ಷದ ಸಭೆಯನ್ನು ನಡೆಸಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಆರೋಗ್ಯ ಸಚಿವ ಶಿವಾನಂದ ಪಾಟೀಲ್, ಕಾಂಗ್ರೆಸ್ ಮುಖಂಡರಾದ ಎಸ್.ಆರ್.ಪಾಟೀಲ್, ವೀರಣ್ಣ ಮತ್ತಿಕಟ್ಟಿ ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮೇಗೌಡ ಅವರ ಪರವಾಗಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.
ಇದೇ ರೀತಿ ಎಲ್ಲಾ ಕ್ಷೇತ್ರಗಳ ಉಪಚುನಾವಣೆಯ ಕ್ಷೇತ್ರಗಳಲ್ಲೂ ಮೂರು ಪಕ್ಷಗಳ ನಾಯಕರು, ಮುಖಂಡರು ಅಬ್ಬರದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಬಹಿರಂಗ ಪ್ರಚಾರ ಅಂತ್ಯಗೊಳ್ಳಲು ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಪ್ರಚಾರದ ಭರಾಟೆಯನ್ನು ಹೆಚ್ಚಿಸಿವೆ.