
ಬೆಂಗಳೂರು: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ತೀವ್ರ ಅಸ್ವಸ್ಥರಾಗಿರುವ ಬೆನ್ನಿಗೇ ಬಿಜೆಪಿ ಹಿರಿಯ ಮುಖಂಡ, ಕೇಂದ್ರ ಸಚಿವ ಕರ್ನಾಟಕದ ಅನಂತ್ ಕುಮಾರ್ ಅವರ ಆರೋಗ್ಯ ಸಮಸ್ಯೆಯೂ ಬಿಗಡಾಯಿಸಿದ್ದು, ನಗರದ ಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಳಗ್ಗೆ ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಅನಂತ್ಕುಮಾರ್ ಅವರ ಆರೋಗ್ಯ ವಿಚಾರಿಸಿದರು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರೂ ಕೂಡ ಇಂದು ಸಂಜೆ ಬೆಂಗಳೂರಿಗೆ ಆಗಮಿಸಿ, ಅನಂತ್ಕುಮಾರ್ ಅವರ ಆರೋಗ್ಯ ವಿಚಾರಿಸಲಿದ್ದಾರೆ.
ಅನಂತ್ಕುಮಾರ್ ಅವರು ಶ್ವಾಸಕೋಶದ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದ್ದು, ಬಸವನಗುಡಿಯ ಶಂಕರ್ ಆಸ್ಪತ್ರೆಗೆ ದಾಖಲಾಗಿದೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ಸುಮಿತ್ರಾ ಮಹಾಜನ್ ಅವರು ಅನಂತ್ಕುಮಾರ್ ಅವರ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗುವಂತೆ ಶುಭ ಹಾರೈಸಿದರು.
ಇಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ಆಗಮಿಸಲಿರುವ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಆಸ್ಪತ್ರೆಗೆ ತೆರಳಿ, ಅನಂತ್ಕುಮಾರ್ ಅವರು ಆರೋಗ್ಯ ವಿಚಾರಿಸಲಿದ್ದಾರೆ.
ಮೋದಿ ಸರ್ಕಾರದಲ್ಲಿ ಸಂಸದೀಯ ಮತ್ತು ರಸಗೊಬ್ಬರ ಖಾತೆ ಸಚಿವರಾಗಿರುವ ಅನಂತ್ ಕುಮಾರ್ ಪಕ್ಷದ ಹಿರಿಯ ಮುಖಂಡರಾಗಿದ್ದು ಈ ಹಿಂದಿನ ವಾಜಪೇಯಿ ಸರಕಾರದಲ್ಲೂ ಸೇವೆ ಸಲ್ಲಿಸಿರುವವರು. ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಸತತವಾಗಿ ಚುನಾವಣೆ ಗೆಲ್ಲುತ್ತಾ ಬಂದಿರುವ ಅನಂತ್ ಕುಮಾರ್ 2014 ರಲ್ಲಿ ಆಧಾರ್ ಮುಖ್ಯಸ್ಥ ನಂದನ್ ನಿಲೇಕಣಿಯವರನ್ನು ಸೋಲಿಸಿದ್ದರು.