ಬೆಂಗಳೂರು, ಅ.27- ತನ್ನೊಂದಿಗೆ ನಟ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ನಟಿ ಶೃತಿ ಹರಿಹರನ್ ಇಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಕೀಲ ಅನಂತ್ ನಾಯ್ಕ್ ಅವರೊಂದಿಗೆ ಠಾಣೆಗೆ ಆಗಮಿಸಿದ ಅವರು, ಅರ್ಜುನ್ ಸರ್ಜಾ ಅವರ ವಿರುದ್ಧ ಕಾನೂನು ರೀತಿಯ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ನಗರದ ಯು.ಬಿ. ಸಿಟಿಗೆ ಶೂಟಿಂಗ್ಗೆ ಹೋಗಿದ್ದಾಗ ನಟ ಅರ್ಜುನ್ ಸರ್ಜಾ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೆ ಚಿತ್ರೀಕರಣದ ಪ್ರದೇಶಗಳಲ್ಲೂ ತನ್ನೊಂದಿಗೆ ಅವರು ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡಿರುವುದಾಗಿ ಶೃತಿ ಹರಿಹರನ್ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಕೇಂದ್ರ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.
ಈ ಕಿರುಕುಳದಿಂದಾಗಿ ಮಾನಸಿಕವಾಗಿ ನಾನು ಕುಗ್ಗಿಹೋಗಿದ್ದು, ಹಲವು ರಾತ್ರಿಗಳನ್ನು ನಿದ್ರೆ ಇಲ್ಲದೆ ಕಳೆದಿದ್ದೇನೆ. ಅವರು ರಾಜಕೀಯವಾಗಿ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ನಾನು ಅಸಹಾಯಕಳಾಗಿದ್ದೇನೆ ಎಂದು ಶೃತಿ ದೂರಿನಲ್ಲಿ ತಿಳಿಸಿದ್ದಾರೆ.
ಅರ್ಜುನ್ ಸರ್ಜಾ ವಿರುದ್ಧ ಮೀಟೂ ಅಭಿಯಾನದಲ್ಲಿ ಲೈಂಗಿಕ ಕಿರುಕುಳದ ಆರೋಪ ಮಾಡಿ ಶೃತಿ ಹರಿಹರನ್ ಸ್ಯಾಂಡಲ್ವುಡ್ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.
ಇಬ್ಬರ ನಡುವೆ ಆರೋಪ-ಪ್ರತ್ಯಾರೋಪ ಹೆಚ್ಚಾಗುತ್ತಿರುವ ಮಧ್ಯೆಯೇ ಅರ್ಜುನ್ ಸರ್ಜಾ ಅವರ ಮ್ಯಾನೇಜರ್ ಇತ್ತೀಚೆಗೆ ನಗರ ಪೆÇಲೀಸ್ ಆಯುಕ್ತ ಸುನೀಲ್ ಕುಮಾರ್ ಅವರನ್ನು ಭೇಟಿಯಾಗಿ, ಅರ್ಜುನ್ ಅವರ ಈಮೇಲ್ ಮತ್ತು ಟ್ವಿಟರ್ ಹ್ಯಾಕ್ ಮಾಡಿ ಅವರನ್ನು ತೇಜೋವಧೆ ಮಾಡಲಾಗುತ್ತಿದೆ ಎಂದು ದೂರು ನೀಡಿದ್ದರು. ಈ ಪ್ರಕರಣವನ್ನು ಈಗಾಗಲೇ ಸೈಬರ್ ಕ್ರೈಂ ವಿಭಾಗದ ಪೆÇಲೀಸರಿಗೆ ವರ್ಗಾಯಿಸಲಾಗಿದೆ.
ತನ್ನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಶೃತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನೂ ದಾಖಲಿಸಿದ್ದಾರೆ.
ಈ ಮಧ್ಯೆ ಅರ್ಜುನ್ ಸರ್ಜಾ ಅವರ ಬೆಂಬಲಿಗ ಪ್ರಶಾಂತ್ ಸಂಬರಗಿ ಅವರು ತಮ್ಮ ವಿರುದ್ಧ ಅಪಪ್ರಚಾರ ಮಾಡಿ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶೃತಿ ಹರಿಹರನ್ ಕೂಡ ಹೈಗ್ರೌಂಡ್ ಠಾಣೆಗೆ ದೂರು ನೀಡಿದ್ದಾರೆ.
ಅರ್ಜುನ್ ಸರ್ಜಾ ಮತ್ತು ಶೃತಿ ಹರಿಹರನ್ ನಡುವೆ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದಾಗಿ ಎರಡೂ ಕಡೆಯವರನ್ನು ಕರೆದು ಮಾತುಕತೆ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಇಬ್ಬರ ನಡುವೆ ದೂರು ಪ್ರತಿದೂರು ನೀಡುವ ಪ್ರಕ್ರಿಯೆ ಮುಂದುವರಿಯುತ್ತಲೆ ಇದೆ.