ನವದೆಹಲಿ: ದೇಶದ ತನಿಖಾ ಸಂಸ್ಥೆಗಳಲ್ಲಿನ ಆಂತರಿಕ ಹಗ್ಗಜಗ್ಗಾಟಗಳು ಒಂದೊಂದಾಗಿಯೇ ಮುನ್ನೆಲೆಗೆ ಬರುತ್ತಿವೆ. ಸಿಬಿಐ ಅಧಿಕಾರಿಗಳ ಪರಸ್ಪರ ಭ್ರಷ್ಟಾಚಾರ ಆರೋಪಗಳು ಕೋರ್ಟ್ ಮೆಟ್ಟಿಲೇರುರಿವ ಬೆನ್ನಲ್ಲೇ ಇದೀಗ ಇ.ಡಿಯಲ್ಲೂ ಬಿರುಗಾಳಿ ಎದ್ದಿದೆ.
ಸಿಬಿಐನ ಇಬ್ಬರು ಅತ್ಯುನ್ನತ ಅಧಿಕಾರಿಗಳ ವಿರುದ್ಧ ಕೇಂದ್ರ ಸರಕಾರ ರಾತ್ರೋರಾತ್ರಿ ಕ್ರಮ ಕೈಗೊಳ್ಳುತ್ತದೆ. ಸಿಬಿಐ ಅಧಿಕಾರಿಗಳ ಕಚೇರಿ ಬಳಿ ಸುಳಿಯುತ್ತಿದ್ದ ಕೆಲ ಐಬಿ ಗುಪ್ತಚರ ದಳದ ಸಿಬ್ಬಂದಿಯನ್ನು ಅನಾಮತ್ತಾಗಿ ಬಂಧಿಸುವ ಹೈಡ್ರಾಮಾ ನಡೆಯುತ್ತದೆ. ಇತ್ತ, ಹಣ ಅವ್ಯವಹಾರ ಪ್ರಕರಣಗಳ ತನಿಖೆ ನಡೆಸುವ ಜಾರಿ ನಿರ್ದೇಶನಾಲಯದಲ್ಲೂ ಬೆಂಕಿ ಬಿರುಗಾಳಿ ಎದ್ದಿದೆ.
ಜಾರಿ ನಿರ್ದೇಶನಾಲಯದ ನಿರ್ದೇಶಕ ಕರ್ನಾಲ್ ಸಿಂಗ್ ಅವರು ತಮ್ಮ ಅಧಿಕಾರಾವಧಿಯ ಕೊನೆಯ ದಿನದಂದು ಪಿ. ಚಿದಂಬರಂ ವಿರುದ್ಧದ ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಚಾರ್ಜ್ಶೀಟ್ ಸಲ್ಲಿಕೆಯಾಗುವಂತೆ ನೋಡಿಕೊಂಡಿದ್ದಾರೆ. ಎರಡೂವರೆ ವರ್ಷಗಳ ಕಾಲ ಇ.ಡಿ. ನಿರ್ದೇಶಕರಾಗಿ ಕರ್ನಾಲ್ ಸಿಂಗ್ ಹಲವು ಮಹತ್ವದ ತನಿಖೆಗಳ ನಿರ್ವಹಣೆ ಮಾಡಿದ್ದಾರೆ. ಎನ್ಡಿಟಿವಿ ವಿರುದ್ಧದ ಪ್ರಕರಣ, ಸೋನಿಯಾ-ರಾಹುಲ್ ವಿರುದ್ಧದ ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆಯಲ್ಲಿ ಕರ್ನಾಲ್ ಸಿಂಗ್ ಅವರ ಪಾತ್ರ ಮಹತ್ವದ್ದಾಗಿದೆ. ಇವರ ಸೇವಾವಧಿಯನ್ನು ವಿಸ್ತರಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಇತ್ತಾದರೂ ಕಾರಣಾಂತರದಿಂದ ಅದು ಸಾಧ್ಯವಿಲ್ಲವೆನ್ನಲಾಗಿದೆ. ಅವರ ಸ್ಥಾನಕ್ಕೆ ಸಂಜಯ್ ಮಿಶ್ರಾ ಎಂಬುವವರನ್ನು ಕೂರಿಸಬಹುದು ಎನ್ನುತ್ತವೆ ಸುದ್ದಿಮೂಲಗಳು. ಸಂಜಯ್ ಮಿಶ್ರಾ ಅವರು 1984ರ ಬ್ಯಾಚ್ನ ಐಆರ್ಎಸ್ ಅಧಿಕಾರಿಯಾಗಿದ್ದಾರೆ.
ಇನ್ನೊಂದೆಡೆ, ಕರ್ನಾಲ್ ಸಿಂಗ್ ಅವರ ಆಪ್ತರೆನ್ನಲಾದ ಜಾರಿ ನಿರ್ದೇಶನಾಲಯದ ಮತ್ತೊಬ್ಬ ಪ್ರಮುಖ ಅಧಿಕಾರಿ ರಾಜೇಶ್ವರ್ ಸಿಂಗ್ ಅವರ ಸ್ಥಾನಕ್ಕೆ ಕುತ್ತು ಬರುವ ಬೆಳವಣಿಗೆಯಾಗಿದೆ. 2ಜಿ ಸ್ಪೆಕ್ಟ್ರಂ, ಏರ್ಸೆಲ್-ಮ್ಯಾಕ್ಸಿಸ್ ಮೊದಲಾದ ಪ್ರಕರಣಗಳ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಜೇಶ್ವರ್ ಸಿಂಗ್ ಅವರನ್ನು ಇ.ಡಿ.ಯಿಂದ ಹೊರಗಟ್ಟುವ ಬಗ್ಗೆ ಕೆಲ ದಿನಗಳ ಹಿಂದೆ ಸುದ್ದಿಗಳು ರಾಚಿದ್ದರು. ಅದಕ್ಕೆ ಪೂರಕವೆಂಬಂತೆ ಅಕ್ರಮ ಆಸ್ತಿ ಗಳಿಕೆಯ ಆರೋಪ ಎದುರಿಸುತ್ತಿರುವ ರಾಜೇಶ್ವರ್ ಸಿಂಗ್ ವಿರುದ್ಧ ಕೇಂದ್ರ ಸರಕಾರವು ಪ್ರಾಥಮಿಕ ತನಿಖೆಗೆ ಆದೇಶಿಸಿದೆ. ರಾಜೇಶ್ವರ್ ಸಿಂಗ್ ವಿರುದ್ಧ ತನಿಖೆ ನಡೆಸಲು ಜೂನ್ 27ರಂದು ಸುಪ್ರೀಮ್ ಕೋರ್ಟ್ನಿಂದಲೇ ಅನುಮತಿ ಸಿಕ್ಕಿತ್ತು. ಇದೀಗ ಕಂದಾಯ ಇಲಾಖೆಯು ರಾಜೇಶ್ವರ್ ಅವರ ಅಕ್ರಮ ಆಸ್ತಿ ಗಳಿಕೆಯ ಪ್ರಕರಣದ ತನಿಖೆ ನಡೆಸಲಿದೆ. ಈ ಪ್ರಾಥಮಿಕ ತನಿಖೆಯ ವರದಿ ಆಧಾರದ ಮೇಲೆ ರಾಜೇಶ್ವರ್ ವಿರುದ್ಧ ಕೇಂದ್ರವು ಸೂಕ್ತ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಕುತೂಹಲದ ವಿಚಾರವೆಂದರೆ ಜಾರಿ ನಿರ್ದೇಶನಾಲಯದ ಕರ್ನಾಲ್ ಸಿಂಗ್ ಮತ್ತು ರಾಜೇಶ್ವರ್ ಸಿಂಗ್ ಅವರಿಬ್ಬರೂ ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಅವರೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡಿರುವವರಾಗಿದ್ದಾರೆ. ಅಲೋಕ್ ಕುಮಾರ್ ವರ್ಮಾ ಹಾಗೂ ಅವರ ಸಹಾಯಕ ಅಧಿಕಾರಿ ರಾಕೇಶ್ ಅಸ್ತಾನ ಅವರ ನಡುವೆ ಕಿತ್ತಾಟ ನಡೆದು ಅವರಿಬ್ಬರಿಗೂ ಕೇಂದ್ರ ಸರಕಾರ ಕಡ್ಡಾಯ ರಜೆ ಕೊಟ್ಟು ಬೇರೊಬ್ಬ ಅಧಿಕಾರಿಯನ್ನು ತಂದು ಕೂರಿಸಿದ್ದಾಗಿದೆ. ಈಗ ಅಲೋಕ್ ಕುಮಾರ್ ವರ್ಮಾ ಅವರು ಕೇಂದ್ರದ ಕ್ರಮ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಪರಿಣಾಮವಾಗಿ ನಿವೃತ್ತ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಕೇಂದ್ರ ವಿಚಕ್ಷಣ ದಳದ ತಂಡವೊಂದರಿಂದ ಪ್ರಕರಣದ ತನಿಖೆಯಾಗಲಿದೆ.
ಅಲೋಕ್ ಕುಮಾರ್ ವರ್ಮಾ ಅವರು ರಫೇಲ್ ಹಗರಣದ ತನಿಖೆ ಕೈಗೆತ್ತಿಕೊಂಡಿದ್ದರಿಂದ ಅವರನ್ನು ಹೊರಹಾಕುವ ಪ್ರಯತ್ನವಾಗಿದೆ ಎಂಬುದು ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳ ಆರೋಪವಾಗಿದೆ. ಆದರೆ, ಸಿಬಿಐ ನಿರ್ದೇಶಕರು ತಾನು ರಫೇಲ್ ಹಗರಣದ ತನಿಖೆ ನಡೆಸಿಲ್ಲ ಎಂದು ಸ್ಪಷ್ಟನೆ ಕೊಟ್ಟಾಗಿದೆ. ಈ ಹಿನ್ನೆಲೆಯಲ್ಲಿ ಅಲೋಕ್ ಕುಮಾರ್ ಅವರನ್ನು ಕೇಂದ್ರ ಯಾಕೆ ಟಾರ್ಗೆಟ್ ಮಾಡಿದೆ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
ಬೇರೆ ಬೇರೆ ಇಲಾಖೆಯಲ್ಲಿದ್ದರೂ ಪರಸ್ಪರ ಪೂರಕವಾಗಿ ಒಂದು ತಂಡವಾಗಿ ಕೆಲಸ ಮಾಡಿದ ಅಲೋಕ್ ಕುಮಾರ್ ವರ್ಮಾ, ಕರ್ನಾಲ್ ಸಿಂಗ್ ಮತ್ತು ರಾಜೇಶ್ವರ್ ಸಿಂಗ್ ಈ ಮೂವರು ಹೊರಹೋದ ನಂತರ ತನಿಖಾ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲೇ ಗಮನಾರ್ಹ ಬದಲಾವಣೆಯಾಗಲಿದೆಯಾ ಎಂಬ ಕುತೂಹಲವಂತೂ ಮೂಡಿದೆ.
ನ್ಯಾಷನಲ್ ಹೆರಾಲ್ಡ್ ಮತ್ತು ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣಗಳಲ್ಲಿ ದೂರುದಾರರಾಗಿ ಹೋರಾಡುತ್ತಿರುವ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಈ ಮೂವರು ಅಧಿಕಾರಿಗಳ ಅಗತ್ಯತೆಯನ್ನು ಪ್ರತಿಪಾದಿಸುತ್ತಲೇ ಬರುತ್ತಿದ್ದಾರೆ. ಈ ಪ್ರಕರಣಗಳ ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ರಾಜೇಶ್ವರ್ ಸಿಂಗ್ ಅವರನ್ನು ಇಡಿಯಿಂದ ಹೊರಗಟ್ಟಿದರೆ ತನ್ನೆಲ್ಲಾ ಪ್ರಯತ್ನಗಳು ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಪಿ.ಚಿದಂಬರಮ್ ಅವರನ್ನು ರಕ್ಷಿಸಲು ಮೋದಿ ಸರಕಾರವೇ ಸಹಾಯ ಮಾಡಿದಂತಾಗುತ್ತದೆ. ಹಾಗೇನಾದರೂ ಆದರೆ ಪ್ರಕರಣಗಳನ್ನ ಕೈಬಿಡುವುದು ಬಿಟ್ಟರೆ ಬೇರೆ ದಾರಿ ಇಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಹತಾಶೆಗೊಂಡಿದ್ದಾರೆ.
ಇದೀಗ ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ ಚಾರ್ಜ್ಶೀಟ್ ಸಲ್ಲಿಸುವ ಮೂಲಕ ಪಿ.ಚಿದಂಬರಂ ಅವರಿಗೆ ಇ.ಡಿ. ಕುಣಿಕೆ ಹಾಕಿರುವುದೇನೋ ಹೌದು. ಒಂದು ವೇಳೆ, ಇ.ಡಿ. ಅಧಿಕಾರಿ ರಾಜೇಶ್ವರ್ ಸಿಂಗ್ ವಿರುದ್ಧದ ಭ್ರಷ್ಟಾಚಾರದ ಆರೋಪ ಸಾಬೀತಾದರೆ ಅವರನ್ನು ತನಿಖಾ ಸಂಸ್ಥೆಯಿಂದಲೇ ಹೊರಹಾಕುವ ಸಾಧ್ಯತೆ ಇದ್ದೇ ಇದೆ.
ಆದರೆ, ಜಾರಿ ನಿರ್ದೇಶನಲಾಯದ ಹೊಸ ಕ್ಯಾಪ್ಟನ್ ಆಗಲಿರುವ ಸಂಜಯ್ ಮಿಶ್ರಾ ಅವರೂ ಐಟಿ ಇಲಾಖೆಯ ಮುಖ್ಯ ಆಯುಕ್ತರಾಗಿದ್ದಾಗ ನ್ಯಾಷನಲ್ ಹೆರಾಲ್ಡ್, ಎನ್ಡಿಟಿವಿ, ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣಗಳ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣಗಳ ತನಿಖೆ ಹಳಿ ತಪ್ಪುವ ಸಾಧ್ಯತೆ ಇಲ್ಲವೆಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ರಫೇಲ್ ಹಗರಣದ ತನಿಖೆಯ ಕಥೆ ಏನಾಗುತ್ತದೆ ಎಂಬುದು ಸದ್ಯಕ್ಕಿರುವ ಯಕ್ಷ ಪ್ರಶ್ನೆಯಾಗಿದೆ.