ರಾಯಪುರ: ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿಯೂ ಬಿಜೆಪಿಯೇ ಗೆಲುವು ಸಾಧಿಸಲಿದ್ದು, ನಾಲ್ಕನೆ ಅವಧಿಗೂ ಪಕ್ಷ ಜಯಗಳಿಸಲಿದೆ ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ತಿಳಿಸಿದೆ.
ಒಟ್ಟು 90 ವಿಧಾನಸಭಾ ಕ್ಷೇತ್ರಗಳ ಪೈಕಿ 50 ಸ್ಥಾನಗಳನ್ನು ಗೆದ್ದು ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ. ರಮಣ್ ಸಿಂಗ್ ನಾಲ್ಕನೇ ಅವಧಿಯೂ ಮುಖ್ಯಮಂತ್ರಿಯಾಗಿ ಮುಂದುವರಿಯುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಸಮೀಕ್ಷೆ ಹೇಳಿದೆ.
ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‌ಗೆ ಕೇವಲ 30 ಸ್ಥಾನ ಸಿಗಲಿದ್ದು, ಈ ಬಾರಿಯೂ ಕಾಂಗ್ರೆಸ್ ಗೆ ಪ್ರತಿಪಕ್ಷದ ಸ್ಥಾನವೇ ಖಾಯಂ ಎಂದು ಹೇಳಲಾಗಿದೆ.
ನಕ್ಸಲ್ ಹಾವಳಿ ಹೆಚ್ಚಿರುವ ಬಸ್ತಾರ್ ವಲಯದಲ್ಲಿ ಈ ಬಾರಿ ಕಾಂಗ್ರೆಸ್ ಪ್ರಭಾವ ಹೆಚ್ಚಲಿದೆ ಎನ್ನುವ ಭವಿಷ್ಯ ಸುಳ್ಳಾಗುವ ಸಾಧ್ಯತೆ ಇದ್ದು, ಈ ಪ್ರದೇಶದಲ್ಲಿ ರಮಣ್ ಸಿಂಗ್ ಸರಕಾರ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಆದ್ಯತೆ ನೀಡಿದ್ದರಿಂದ ಬಿಜೆಪಿ ನೆಚ್ಚಿನ ಸ್ಥಾನ ಪಡೆದುಕೊಳ್ಳಲಿದೆ. ಇಲ್ಲಿನ 12 ಸ್ಥಾನಗಳ ಪೈಕಿ 10ರಲ್ಲಿ ಬಿಜೆಪಿ ಗೆಲ್ಲುತ್ತದೆ. 2 ಸ್ಥಾನ ಕಾಂಗ್ರೆಸ್ ಪಾಲಾಗುತ್ತವೆ ಎಂದು ಸಮೀಕ್ಷೆ ತಿಳಿಸಿದೆ.
ಇನ್ನು ಮಾಯಾವತಿ ನೇತೃತ್ವದ ಬಿಎಸ್ಪಿ ಜತೆ ಹೊಂದಾಣಿಕೆ ಮಾಡಿಕೊಂಡಿರುವ ಅಜಿತ್ ಜೋಗಿ ನೇತೃತ್ವದ ಜನತಾ ಕಾಂಗ್ರೆಸ್ ಛತ್ತೀಸ್‌ಗಢ ಹೇಳಿಕೊಳ್ಳುವ ಸಾಧನೆ ಮಾಡಲಾರದು. ಜೋಗಿ-ಮಾಯಾವತಿ ಜಂಟಿ ಸಾಧನೆ 9 ಸ್ಥಾನಗಳ ಗಡಿ ದಾಟುವುದಿಲ್ಲ. ಬಿಲಾಸ್ಪುರ ವಲಯದಲ್ಲಿ ಜೋಗಿ ಪ್ರಭಾವ ಭರ್ಜರಿಯಾಗಿದೆ. ಈ ವಲಯದ ಏಳು ಸ್ಥಾನಗಳನ್ನು ಜನತಾ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದ್ದು, ಇದು ಕಾಂಗ್ರೆಸ್ ಹಿನ್ನಡೆಗೆ ಕಾರಣವಾಗಲಿದೆ ಎನ್ನಲಾಗಿದೆ.
ರಮಣ್ ಸಿಂಗ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎನ್ನುವ ಪರ ಶೇ.40.71ರಷ್ಟು ಮಂದಿ ಒಲವು ವ್ಯಕ್ತಪಡಿಸಿದ್ದಾರೆ. ಶೇ.19.2ರಷ್ಟು ಮಂದಿ ಮಾತ್ರ ಕಾಂಗ್ರೆಸ್‌ನ ಭೂಪೇಶ್ ಬಘೇಲ್ ಸಿಎಂ ಆದರೆ ಅಡ್ಡಿಯಿಲ್ಲಎಂದಿದ್ದಾರೆ.
ಒಟ್ಟು ಸ್ಥಾನ: 90
ಬಿಜೆಪಿ: 50
ಕಾಂಗ್ರೆಸ್: 30
ಜನತಾ ಕಾಂಗ್ರೆಸ್: 9
ಇತರರು- 1
ಚುನಾವಣೆ:
ನವೆಂಬರ್ 12 ಮತ್ತು 20
ಎರಡು ಹಂತಗಳಲ್ಲಿ ಮತದಾನ
ಡಿಸೆಂಬರ್ 11 – ಫಲಿತಾಂಶ