ಬಿಹಾರದಲ್ಲಿ ಬಿಜೆಪಿ-ಜೆಡಿಯು 50-50 ಸೂತ್ರ; ಎನ್​ಡಿಎ ಮೈತ್ರಿಕೂಟದಿಂದ ಹೊರನಡೆಯಲು ಆರ್​ಎಲ್​ಎಸ್​ಪಿ ಸಜ್ಜು

ಪಟ್ನಾ: ಬಿಹಾರದಲ್ಲಿನ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಯು ಪಕ್ಷಗಳು 50:50 ಸೂತ್ರದೊಂದಿಗೆ ಸೀಟು  ಹಂಚಿಕೊಳ್ಳಲು ನಿರ್ಧರಿಸಿವೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೇ ಈ ಸೂತ್ರವನ್ನು ಬಹಿರಂಗಪಡಿಸಿದ್ದಾರೆ. ಬಿಜೆಪಿ ಮತ್ತು ಸಂಯುಕ್ತ ಜನತಾ ದಳ ಪಕ್ಷಗಳು ಸಮಾನ ಕ್ಷೇತ್ರಗಳನ್ನು ಪಡೆಯಲಿವೆ ಎಂದು ಅಮಿತ್ ಶಾ ತಿಳಿಸಿದ್ದಾರೆ. ಆದರೆ, ನ್ಯೂಸ್18 ವಾಹಿನಿಗೆ ಸಿಕ್ಕ ಮಾಹಿತಿ ಪ್ರಕಾರ, ಬಿಹಾರದ 40 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತು ಜೆಡಿಯು ಪಕ್ಷಗಳು ತಲಾ 17 ಸೀಟುಗಳಲ್ಲಿ ಕಣಕ್ಕಿಳಿಯಲಿವೆ. ಇನ್ನುಳಿದ 6 ಕ್ಷೇತ್ರಗಳನ್ನು ಇತರ ಎನ್​ಡಿಎ ಮಿತ್ರಪಕ್ಷಗಳಿಗೆ ಬಿಟ್ಟುಕೊಡಲು ನಿರ್ಧರಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಅಧಿಕೃತ ಮಾಹಿತಿ ಬೆಳಕಿಗೆ ಬರಲಿದೆ.
ಆದರೆ, ಅಮಿತ್ ಶಾ ಅವರು ಇವತ್ತು ಮಾಧ್ಯಮಗಳಿಗೆ ಸೀಟು ಹಂಚಿಕೆ ಸೂತ್ರ ಪ್ರಕಟಿಸಿದ ಬೆನ್ನಲ್ಲೇ ಎನ್​ಡಿಎ ಮಿತ್ರಪಕ್ಷವಾದ ರಾಷ್ಟ್ರೀಯ ಲೋಕ ಸಮತಾ ಪಕ್ಷದ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಅವರು ಶುಕ್ರವಾರ ಸಂಜೆ ಆರ್​ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರನ್ನು ಭೇಟಿಯಾಗಿದ್ದು ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ, ಆರ್​ಎಲ್​ಎಸ್​ಪಿ ಪಕ್ಷಕ್ಕೆ ಅಮಿತ್ ಶಾ ಪ್ರಕಟಿಸಿದ ಫಾರ್ಮುಲಾ ಹಿಡಿಸಿಲ್ಲವೆನ್ನಲಾಗಿದೆ. ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಬಿಟ್ಟರೆ ಉಳಿದಿರುವ ಎನ್​ಡಿಎ ಮೈತ್ರಿ ಪಕ್ಷಗಳೆಂದರೆ ಎಲ್​ಜೆಪಿ ಮತ್ತು ಆರ್​ಎಲ್​ಎಸ್​ಪಿ ಮಾತ್ರ. ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್​ಜೆಪಿ ಪಕ್ಷಕ್ಕೆ 6 ಕ್ಷೇತ್ರಗಳು ಹೋಗಲಿದೆ. ಇನ್ನುಳಿದ 2 ಕ್ಷೇತ್ರಗಳಿಗೆ ಉಪೇಂದ್ರ ಕುಶ್ವಾಹ ತೃಪ್ತಿಪಡಬೇಕಾಗುತ್ತದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಆರ್​ಎಲ್​ಎಸ್​ಪಿ 3 ಕ್ಷೇತ್ರಗಳನ್ನ ಗೆದ್ದಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಕನಿಷ್ಠ 3 ಕ್ಷೇತ್ರಗಳನ್ನಾದರೂ ನಿರೀಕ್ಷಿಸಿದ್ದ ಉಪೇಂದ್ರ ಕುಶ್ವಾಹ ಅವರಿಗೆ ಅಮಿತ್ ಶಾ ಅವರ ಫಾರ್ಮುಲಾ ನಿರಾಸೆ ತಂದಿದೆ. ಪಕ್ಷದ ಮುಖಂಡರು ಈ ಬೇಡಿಕೆಯನ್ನು ಹಲವು ದಿನಗಳಿಂದ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಉಪೇಂದ್ರ ಕುಶ್ವಾಹ ಅವರ ಪಕ್ಷವು ಎನ್​ಡಿಎ ಮೈತ್ರಿಕೂಟದಿಂದಲೇ ಹೊರನಡೆದರೆ ಅಚ್ಚರಿ ಏನಿಲ್ಲ. ಸೈದ್ಧಾಂತಿಕವಾಗಿಯೂ ಬಿಜೆಪಿ ಜೊತೆ ಸಾಮ್ಯತೆ ಇಲ್ಲದ ಅವರ ಪಕ್ಷಕ್ಕೆ ಎನ್​ಡಿಎ ಬಿಟ್ಟು ಹೋಗುವುದು ಕಷ್ಟವೂ ಅಲ್ಲ. ಆದರೆ, ಆರ್​ಜೆಡಿ ಪಕ್ಷವು ಆರ್​ಎಲ್​ಎಸ್​ಪಿಗೆ ಎಷ್ಟು ಸ್ಥಾನ ಬಿಟ್ಟುಕೊಡುತ್ತದೆ ಎಂಬುದು ಸದ್ಯಕ್ಕೆ ಕುತೂಹಲದ ವಿಷಯ.
ಇದೇ ವೇಳೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಬಿಹಾರದ 30 ಕ್ಷೇತ್ರಗಳ ಪೈಕಿ 29ರಲ್ಲಿ ಕಣಕ್ಕಿಳಿದು ಬರೋಬ್ಬರಿ 22 ಸ್ಥಾನಗಳನ್ನ ಜಯಿಸಿತ್ತು. ಅದಾದ ನಂತರ ಬಿಹಾರದಲ್ಲಿ ಜೆಡಿಯುಗಿಂತಲೂ ತಾನೇ ದೊಡ್ಡಣ್ಣನೆಂದು ಬಿಜೆಪಿ ಬೀಗುತ್ತಾ ಬಂದಿತ್ತು. ಈ ಹಿನ್ನೆಲೆಯಲ್ಲಿ ಇವತ್ತು ಅಮಿತ್ ಶಾ ಅವರು 50-50 ಫಾರ್ಮುಲಾಗೆ ಒಪ್ಪಿಕೊಂಡಿರುವುದು ಜೆಡಿಯು ಪಕ್ಷಕ್ಕೆ ಸಿಕ್ಕ ಚುನಾವಣಾ ಪೂರ್ವ ಗೆಲುವೆಂದು ಬಣ್ಣಿಸಲಾಗುತ್ತಿದೆ.
ಬಿಹಾರದಲ್ಲಿ ತನ್ನ ಪಟ್ಟು ಸಡಿಲಿಸಿರುವ ಭಾರತೀಯ ಜನತಾ ಪಕ್ಷವು ಮಹಾರಾಷ್ಟ್ರದಲ್ಲಿ ಶಿವಸೇನೆಗೂ ಇಂಥದ್ದೇ ಆಫರ್ ಕೊಡುತ್ತದಾ? ಸಮಾನ ಮನಸ್ಕ ಪಕ್ಷಗಳಾಗಿರುವ ಬಿಜೆಪಿ ಮತ್ತು ಶಿವಸೇನೆ ಪಕ್ಷಗಳು ಮಹಾರಾಷ್ಟ್ರದಲ್ಲಿ ತಾನೇ ದೊಡ್ಡಣ್ಣ ಎಂದು ಪಟ್ಟು ಹಿಡಿದು ನಡೆಯುತ್ತಿರುವುದರಿಂದ ಆ ಎರಡು ಪಕ್ಷಗಳ ನಡುವೆ ಸಂಬಂಧ ಮುರಿದುಬೀಳಲು ಕಾರಣವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಒಂದೊಂದು ಕ್ಷೇತ್ರವೂ ಬಿಜೆಪಿಗೆ ಮುಖ್ಯವಾಗಿರುವುದರಿಂದ ಶಿವಸೇನೆ ಜೊತೆಗೂ ಬಿಜೆಪಿ ತನ್ನ ಬಿಗಿಪಟ್ಟು ಸಡಿಲಗೊಳಿಸಿದರೆ ಅಚ್ಚರಿ ಏನಿಲ್ಲ ಎನ್ನುತ್ತಾರೆ ವಿಶ್ಲೇಷಕರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ