ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೂ ಅವಕಾಶ ನೀಡಬೇಕು ಎಂಬ ಸು[ಪ್ರೀಂ ಕೋರ್ಟ್ ತೀರ್ಪನ್ನು ಬೆಂಬಲಿಸಿದ್ದ ಕೇರಳದ ತಿರುವನಂತಪುರದ ಕುಂಡಮಕಡವುದಲ್ಲಿರುವ ಸ್ವಾಮಿ ಸಂದೀಪಾನಂದ ಗಿರಿಯವರ ಆಶ್ರಮದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ಇಂದು ಬೆಳಿಗ್ಗೆ ದಾಳಿ ನಡೆಸಿರುವ ದುಷ್ಕರ್ಮಿಗಳು ಆಶ್ರಮಕ್ಕೆ ಸೇರಿದ ಎರಡು ಕಾರು ಹಾಗೂ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಆಶ್ರಮದ ತುಂಬ ದಟ್ಟ ಹೊಗೆ ಆವರಿಸಿದ್ದು, ಶ್ರಮದಲ್ಲಿದ್ದ ಸೇವಕರು ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಬೆಂಕಿ ನಂದಿಸಿದ್ದು, ವಾಹನಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ.
ದುಷ್ಕರ್ಮಿಗಳ ಅಟ್ಟಹಾಸಕ್ಕೆ ಆಶ್ರಮದ ಸುತ್ತ ಮುತ್ತಲಿನ ಕಟ್ಟಡಗಳಿಗೂ ಹಾನಿಯುಂಟಾಗಿದ್ದು, ಘಟನೆ ಸ್ವಾಮಿಜೀ ಸಂದೀಪಾನಂದ ಗಿರಿಯವರು ಆಶ್ರಮದಲ್ಲಿರಲಿಲ್ಲ. ಆಶ್ರಮದಲ್ಲಿ ಕೇವಲ ಇಬ್ಬರು ಸೇವಕರು ಮಾತ್ರ ಇದ್ದರು ಎಂದು ತಿಳಿದುಬಂದಿದೆ.
ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಂದೀಪಾನಂದ ಅವರು, ದಾಳಿ ಹಿಂದೆ, ಬಿಜೆಪಿ ಸಂಘ ಪರಿವಾರ, ಪಂದಳಂ ರಾಜಮನೆತನದ ಕುಟುಂಬ, ತಂಝಾಮೋನ್ ತಂತ್ರಿ ಹಾಗೂ ಅಯ್ಯಪ್ಪ ಧರ್ಮಸೇನಾ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಇಂತಹ ಕೃತ್ಯ ಎಸಗಿದ ಮಾತ್ರಕ್ಕೆ ನಾನು ಹೆದರುವುದಿಲ್ಲ. ಈ ರೀತಿ ದುಷ್ಕರ್ಮಿಗಳು ಒಂದು ದಿನ ಬೆಂಕಿ ಹಚ್ಚಬಹುದು ಆದರೆ ಹೀಗೆ ಮುಂದುವರೆಯಲು ಸಾಧ್ಯವಿಲ್ಲ. ಅವರ ಕೃತ್ಯಗಳಿಗೆ ಹೆದರಿ ನಾನು ಸತ್ಯವನ್ನು ನಿಲ್ಲಿಸಲಾಗದು. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹವಾದದ್ದು ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಡಿಜಿಪಿ ಲೋಕನಾಥ್ ಬೆಹರಾ ಅವರು, ಘಟನೆ ಕುರಿತಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ರಾಜ್ಯದಲ್ಲಿ ಇಂತಹ ಪ್ರಕರಣಗಳನ್ನು ಸಹಿಸುವುದಿಲ್ಲ ಎಂದಿದ್ದಾರೆ.