ಬೆಂಗಳೂರು, ಅ.28- ಕೇಂದ್ರ ಸಚಿವ ಅನಂತ್ ಕುಮಾರ್ ಚಿಕಿತ್ಸಾ ಅವಧಿಯನ್ನು ಮತ್ತೆ 10 ದಿನಗಳ ಕಾಲ ವಿಸ್ತರಿಸಲಾಗಿದೆ. ವೈದ್ಯರ ಸಲಹೆ ಮೇರೆಗೆ ಮತ್ತಷ್ಟು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಂದುವರೆಸಲು ಅನಂತ್ ಕುಮಾರ್ ಕುಟುಂಬಸ್ಥರು ಸಮ್ಮತಿ ನೀಡಿದ್ದಾರೆ. ಹೀಗಾಗಿ ನವೆಂಬರ್ 1ರ ಬದಲು 10 ಕ್ಕೆ ಅವರನ್ನು ಡಿಸ್ಚಾರ್ಜ್ ಮಾಡಲು ಆಸ್ಪತ್ರೆ ವೈದ್ಯರು ನಿರ್ಧರಿಸಿದ್ದಾರೆ.
ಕ್ಯಾನ್ಸರ್‍ನಿಂದ ಬಳಲುತ್ತಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಲಂಡನ್‍ನಲ್ಲಿ ಯಶಸ್ವಿ ಚಿಕಿತ್ಸೆ ಪಡೆದು ವಾಪಾಸಾಗಿದ್ದರೂ ಇನ್ನೂ ಆಸ್ಪತ್ರೆ ವಾಸ ಮಾತ್ರ ತಪ್ಪಿಲ್ಲ. ಲಂಡನ್‍ನಿಂದ ಬೆಂಗಳೂರಿಗೆ ಸತತ 14 ಗಂಟೆ ವಿಮಾನ ಪ್ರಯಾಣದಿಂದಾಗಿ ಆರೋಗ್ಯದಲ್ಲಿ ವ್ಯತ್ಯಾಸಗೊಂಡು ಅವರನ್ನು ನಗರದ ರಂಗಾದೊರೈ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
15 ದಿನಗಳ ಕಾಲ ಚಿಕಿತ್ಸೆ ಪಡೆಯುವಂತೆ ವೈದ್ಯರು ನೀಡಿದ ಸಲಹೆಯಂತೆ ಅಲ್ಲಿಯೇ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ನ. 1 ರಂದು ಅನಂತ್ ಕುಮಾರ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಬೇಕಿತ್ತು. ಆದರೆ ಆರೋಗ್ಯದಲ್ಲಿ ಇನ್ನೂ ಸುಧಾರಣೆ ಆಗಬೇಕಾದ ಕಾರಣ ರಂಗಾದೊರೈ ಆಸ್ಪತ್ರೆ ವೈದ್ಯರು ಮತ್ತೆ 10 ದಿನ ಚಿಕಿತ್ಸೆ ಮುಂದುವರೆಸಲು ನಿರ್ಧರಿಸಿದ್ದಾರೆ. ಈ ಸಂಬಂಧ ಲಂಡನ್ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಚಿಕಿತ್ಸೆ ಮುಂದುವರೆಸುವ ನಿರ್ಧಾರ ಕೈಗೊಂಡಿದ್ದು, ಇದಕ್ಕೆ ಅನಂತ್ ಕುಮಾರ್ ಕುಟುಂಬಸ್ಥರು ಸಮ್ಮತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮತ್ತಷ್ಟು ದಿನ ಚಿಕಿತ್ಸೆ ಮುಂದುವರೆಸಲಿರುವ ಕಾರಣ ಲಂಡನ್‍ನಿಂದ ವಾಪಸ್ಸಾದ ಅನಂತ್ ಕುಮಾರ್ ಮತ್ತೆ 10 ದಿನ ಹೆಚ್ಚುವರಿಯಾಗಿ ಆಸ್ಪತ್ರೆಯಲ್ಲಿಯೇ ಇರಬೇಕಿದೆ. ನ. 1 ರ ಬದಲು 10 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ.