ಬೆಂಗಳೂರು, ಅ.26-ಮೀ ಟೂ ಅಭಿಯಾನ ಈಗ ಕೋರ್ಟ್, ಪೆÇಲೀಸ್ ಠಾಣೆಯ ಮೆಟ್ಟಿಲೇರಿದ್ದು, ಆರೋಪಕ್ಕೆ ಗುರಿಯಾಗಿರುವ ಹಿರಿಯ ನಟ ಅರ್ಜುನ್ ಸರ್ಜಾ, ನಟಿ ಶ್ರುತಿ ಹರಿಹರನ್ ಪರಸ್ಪರ ದೂರು-ಪ್ರತಿದೂರು ದಾಖಲಿಸಿದ್ದಾರೆ.
ಅರ್ಜುನ್ ಸರ್ಜಾ ಅವರು ಶ್ರುತಿಹರಿಹರನ್ ವಿರುದ್ಧ ಮಾನನಷ್ಟ ಹಾಗೂ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದ್ದರೆ, ಇದಕ್ಕೆ ಪ್ರತಿಯಾಗಿ ನಟಿ ಶ್ರುತಿಹರಿಹರನ್ ಅರ್ಜುನ್ ಸರ್ಜಾ ಬೆಂಬಲಿಗರ ವಿರುದ್ಧ ಕೇಸು ದಾಖಲಿಸಿದ್ದಾರೆ.
ನಿನ್ನೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹಿರಿಯ ನಟ ಹಾಗೂ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಹಾಗೂ ಇತರ ಹಿರಿಯರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆ ವಿಫಲವಾಯಿತು.
ಸಭೆಯ ನಂತರ ಅರ್ಜುನ್ ಸರ್ಜಾ ಅವರು ತಾವು ಕಾನೂನು ಹೋರಾಟ ನಡೆಸುವುದಾಗಿ ಘೋಷಿಸಿದರು. ನಟಿ ಶ್ರುತಿಹರಿಹರನ್ ಕೂಡ ಪೆÇಲೀಸ್ ಠಾಣೆಗೆ ದೂರು ನೀಡುವ ಮಾತುಗಳನ್ನಾಡಿದ್ದರು.
ಅದರಂತೆ ಶ್ರುತಿಹರಿಹರನ್ ನಿನ್ನೆ ರಾತ್ರಿಯೇ ಬೆಂಗಳೂರಿನ ಹೈಗ್ರೌಂಡ್ಸ್ ಪೆÇಲೀಸ್ ಠಾಣೆಗೆ ದೂರು ನೀಡಿ, ಅರ್ಜುನ್ ಸರ್ಜಾ ಅವರ ಬೆಂಬಲಿಗ ಪ್ರಶಾಂತ್ ಸಂಬರಗಿ ಹಾಗೂ ಇತರರು ತಮ್ಮ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡಿ, ತೇಜೋವಧೆ ಮಾಡುತ್ತಿದ್ದಾರೆ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ಸೈಬರ್ ಕ್ರೈಂ ಠಾಣೆಗೂ ದೂರು ನೀಡಲು ನಿರ್ಧರಿಸಿದ್ದಾರೆ.
ಶ್ರುತಿ ನೀಡಿರುವ ದೂರಿನಲ್ಲಿ ನಾನು ಜಿ.ಎಂ. ಪಾಳ್ಯದ ಆಂಜನೇಯ ಅಪಾರ್ಟ್ಮೆಂಟ್ ನಿವಾಸಿಯಾಗಿದ್ದು, ಕಳೆದ 7 ವರ್ಷದಿಂದ ಸಿನಿಮಾ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನನಗೆ ನನ್ನದೇ ಆದ ವರ್ಚಸ್ಸು ಮತ್ತು ಅಭಿಮಾನಿಗಳಿದ್ದಾರೆ. ವೃತ್ತಿ ಜೀವನದಲ್ಲಿ ನಡೆಯುವ ದೌರ್ಜನ್ಯದ ವಿರುದ್ಧ ಮೀ ಟೂ ಚಳವಳಿ ಮೂಲಕ ದೇಶಾದ್ಯಂತ ಧ್ವನಿ ಎತ್ತಲಾಗುತ್ತಿದೆ. ಚಳವಳಿಯ ಭಾಗವಾಗಿ ನಾನೂ ಕೂಡ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅ.25 ರಂದು ಸಂಜೆ ಸಂಧಾನ ಸಭೆ ನಡೆಸಿತ್ತು. ಅಲ್ಲಿ ನಾನು ನಟ ಅರ್ಜುನ್ ಸರ್ಜಾ ನೀಡಿರುವ ಲೈಂಗಿಕ ಕಿರುಕುಳ ಮತ್ತು ಬೆದರಿಕೆಗಳ ಬಗ್ಗೆ ಮಾಹಿತಿ ನೀಡಿದ್ದೇನೆ. ಸಭೆಯ ಒಳಗೆ ಮತ್ತು ಹೊರಗೆ ಪ್ರಕರಣಕ್ಕೆ ಸಂಬಂಧಪಡದ ಅನಾವಶ್ಯಕ ವ್ಯಕ್ತಿಗಳು ಜಮಾವಣೆಗೊಂಡಿದ್ದರು.
ಪ್ರಶಾಂತ್ ಸಂಬರಗಿ ಎಂಬ ವ್ಯಕ್ತಿ ಗೂಂಡಾಗಳ ಜೊತೆ ಫಿಲ್ಮ್ ಛೇಂಬರ್ ಹೊರಗೆ ನಿಂತಿದ್ದರು. ಅವರು ಮಾಧ್ಯಮಗಳ ಜೊತೆ ಮಾತನಾಡಿ, ಶ್ರುತಿಹರಿಹರನ್ ಹಿಂದೂಗಳ ಭಾವನೆಗೆ ಧಕ್ಕೆ ತರುವಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿ ನನ್ನ ವಿರುದ್ಧ ಒಂದು ಧರ್ಮದ ಜನರನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದ್ದಾರೆ. ನನ್ನ ಅವಹೇಳನಕ್ಕಾಗಿ ಫೇಸ್ಬುಕ್ನ್ನು ಬಳಸಿಕೊಳ್ಳಲಾಗುತ್ತಿದೆ. ನನ್ನ ಫೇಸ್ಬುಕ್ ಖಾತೆಯೂ ಹ್ಯಾಕ್ ಆಗಿದೆ. ನನ್ನ ಖಾಸಗಿತನಕ್ಕೂ ಧಕ್ಕೆ ಬಂದಿದೆ. ಶ್ರುತಿಹರಿಹರನ್ನನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಪ್ರಶಾಂತ್ ಏಕವಚನದಲ್ಲಿ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಇದರ ಬೆನ್ನಲ್ಲೇ ನಟ ಅರ್ಜುನ್ ಸರ್ಜಾ ಅವರು ಶ್ರುತಿಹರಿಹರನ್ ವಿರುದ್ಧ ಚೆನ್ನೈ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಪೆÇಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಈಗಾಗಲೇ ಶ್ರುತಿಹರಿಹರನ್ ವಿರುದ್ಧ ಮಾನನಷ್ಟ ಸೇರಿದಂತೆ ಎರಡು ಪ್ರಕರಣಗಳನ್ನು ಅರ್ಜುನ್ ಸರ್ಜಾ ನ್ಯಾಯಾಲಯದಲ್ಲಿ ದಾಖಲಿಸಿದ್ದಾರೆ.
ಈಗ ವಿವಿಧ ಅಂತಾರಾಜ್ಯ ನಗರಗಳ ಪೆÇಲೀಸ್ ಠಾಣೆಗಳಲ್ಲಿ ದೂರು ದಾಖಲಿಸುವ ಮೂಲಕ ಶ್ರುತಿಹರಿಹರನ್ ಅವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದ್ದಾರೆ.