ದೀಪಾವಳಿಗೆ ಕಂಪನಿ ಉದ್ಯೋಗಿಗಳಿಗೆ ಕಾರ್ ಗಿಫ್ಟ್ ನೀಡಿದ ಸೂರತ್ ವಜ್ರದ ವ್ಯಾಪಾರಿ

ಸೂರತ್: ಸೂರತ್‌ನ ವಜ್ರದ ವ್ಯಾಪಾರಿಯಾಗಿರುವ ಸಾವ್ಜಿ ಡೋಲಾಕಿಯಾ ಅವರು, ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ದೀಪಾವಳಿ ಪ್ರಯುಕ್ತ ಭರ್ಜರಿ ಉಡುಗೊರೆಯಾಗಿ ಕಾರ್ ಗಳನ್ನು ನೀಡಿದ್ದಾರೆ.

ಶ್ರೀ ಹರಿ ಕೃಷ್ಣ ಎಕ್ಸ್‌ಪೋರ್ಟ್ ವಜ್ರದ ಕಂಪೆನಿ ಮಾಲೀಕರಾಗಿರುವ ಡೋಲಾಕಿಯಾ, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರ ಪೈಕಿ ಉತ್ತಮವಾಗಿ ಕಾರ್ಯನಿರ್ವಹಿಸಿದ 600 ಉದ್ಯೋಗಿಗಳಿಗೆ ಕಾರ್ ಉಡುಗೊರೆ ನೀಡಿದ್ದಾರೆ.

ಈಗಾಗಲೇ ವಿಶೇಷ ಚೇತನ ಮಹಿಳಾ ಉದ್ಯೋಗಿ ಸೇರಿದಂತೆ ನಾಲ್ವರು ನೌಕರರು ದೆಹಲಿ ತಲುಪಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಹಸ್ತದಿಂದ ತಮ್ಮ ಕಾರ್ ಕೀ ಪಡೆಯಲಿದ್ದಾರೆ.

ಇಂದು ಸೂರತ್‌ನ ವರಚ್ಚಾದಲ್ಲಿರುವ ‘ಶ್ರೀ ಹರಿ ಕೃಷ್ಣ ಎಕ್ಸ್‌ಪೋರ್ಟ್’ ಕಂಪೆನಿಯ ಪ್ರಧಾನ ಕಚೇರಿಯಲ್ಲಿ ಆಯೋಚಿಸಲಾಗಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಯೋಗಿಗಳ ಜತೆ ಸಂವಾದ ನಡೆಸಲಿದ್ದಾರೆ.

ಈ ಕುರಿತು ಮಾತನಾಡಿರುವ ಡೋಲಾಕಿಯಾ, ಲಾಯಲ್ಟಿ ಕಾರ್ಯಕ್ರಮದ ಅಡಿಯಲ್ಲಿ ಕಂಪೆನಿಯ 1500 ಉದ್ಯೋಗಿಗಳನ್ನು ಆಯ್ಕೆ ಮಾಡಲಾಗಿತ್ತು. ಈ ಪೈಕಿ 600 ಉದ್ಯೋಗಿಗಳು ಕಾರ್‌ ಆಯ್ಕೆ ಮಾಡಿಕೊಂಡಿದ್ದು, ಅವರಿಗೆ ಕಾರ್ ವಿತರಿಸಲಾಗಿದೆ. ಇನ್ನುಳಿದ 900 ಉದ್ಯೋಗಿಗಳ ಹೆಸರಲ್ಲಿ ಠೇವಣಿ ಇಡಲಾಗಿದೆ. ಈ ವರ್ಷದ ದೀಪಾವಳಿ ಬೋನಸ್‌ಗಾಗಿ 51 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ