ರಾಜ್ಯದಲ್ಲಿ ಮಳೆಯ ಪ್ರಮಾಣ ಇಳಿಕೆ

ಬೆಂಗಳೂರು, ಅ.25- ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಇಳಿಕೆಯಾಗಿದ್ದು, ಇನ್ನೂ ಒಂದು ವಾರ ಉತ್ತಮ ಮಳೆಯಾಗುವ ಮುನ್ಸೂಚನೆ ಇಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್. ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

ರಾಜ್ಯದ ಕೆಲವೆಡೆ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗಬಹುದು. ಆದರೆ ಉತ್ತಮವಾದ ಮಳೆಯಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ವಾತಾವರಣದಲ್ಲಿಯೂ ಕೂಡ ಗಮನಾರ್ಹ ಬದಲಾವಣೆ ಬದಲಾವಣೆ ಆಗುತ್ತಿಲ್ಲ. ಮೇಲ್ಮೈಸುಳಿಗಾಳಿ, ವಾಯುಭಾರ ಕುಸಿತದಂತಹ ಬದಲಾವಣೆಗಳು ಸದ್ಯಕ್ಕೆ ವಾತಾವರಣದಲ್ಲಿ ಕಂಡುಬರುತ್ತಿಲ್ಲ. ಹೀಗಾಗಿ ಏಳೆಂಟು ದಿನಗಳವರೆಗೆ ಮಳೆಯ ಪ್ರಮಾಣ ತೀರಾ ಕಡಿಮೆ ಇರುತ್ತದೆ ಎಂದು ಅವರು ತಿಳಿಸಿದರು.

ಹಗಲು ವೇಳೆ ತಾಪಮಾನ ಹೆಚ್ಚಾಗಿರುತ್ತದೆ. ಹೊಸದಾಗಿ ವಾತಾವರಣದಲ್ಲಿ ಮಳೆ ತರುವಂತಹ ಬದಲಾವಣೆಗಳು ಉಂಟಾಗುವವರೆಗೂ ರಾಜ್ಯದಲ್ಲಿ ಹೆಚ್ಚಿನ ಮಳೆಯನ್ನು ನಿರೀಕ್ಷಿಸಲಾಗದು. ರಾತ್ರಿ ವೇಳೆ ತಾಪಮಾನ ಕಡಿಮೆಯಾಗುತ್ತಿದೆ ಎಂದರು.
ಕಳೆದ ವಾರ ರಾಜ್ಯದ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿತ್ತು. ಇನ್ನೂ ಕೂಡ ಹಿಂಗಾರು ಮಳೆ ಆರಂಭವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ