ಬೆಂಗಳೂರು, ಅ.25-ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಪೌಷ್ಟಿಕ ಆಹಾರ ಸೇವನೆ, ವ್ಯಾಯಾಮ ಮತ್ತು ಯೋಗದಿಂದ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬಹುದೆಂದು ವೀರಶೈವ ಸಹಕಾರಿ ಬ್ಯಾಂಕ್ನ ಅಧ್ಯಕ್ಷರಾದ ಬಿ.ಎಸ್.ಪರಮಶಿವಯ್ಯನವರು ಅಭಿಪ್ರಾಯಪಟ್ಟಿದ್ದಾರೆ.
ವೀರಶೈವ ಸಹಕಾರಿ ಬ್ಯಾಂಕ್ ಹಾಗೂ ಬಸವಶ್ರೀ ಡಯಾಗ್ನಾಸ್ಟಿಕ್ ಸೆಂಟರ್ ವತಿಯಿಂದ ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಬ್ಯಾಂಕ್ನ ಸದಸ್ಯರು ಮತ್ತು ಗ್ರಾಹಕರಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಕಾಯಿಲೆಗಳು ಕಾಡುತ್ತಿದ್ದು, ಇದಕ್ಕೆ ಬದಲಾದ ಆಹಾರಶೈಲಿ ಎಂದರೆ ತಪ್ಪಾಗಲಾರದು.
ಹಿಂದಿನ ಕಾಲದಲ್ಲಿ ಯಾವುದೇ ರಸಗೊಬ್ಬರ, ರಾಸಾಯನಿಕ ಬಳಸದೆ ಸ್ವಾಭಾವಿಕವಾಗಿ ಬೆಳೆಯುತ್ತಿದ್ದ ಆಹಾರ ಸೇವಿಸಿ ದಷ್ಟಪುಷ್ಟ ಹಾಗೂ ಶಕ್ತಿಯುತವಾಗಿರುತ್ತಿದ್ದರು. ಇಂದು ಎಲ್ಲವೂ ರಾಸಾಯನಿಕಮಯವಾಗಿದೆ. ಹಾಗಾಗಿ ಚಿಕ್ಕ ವಯಸ್ಸಿನಲ್ಲೇ ಬಿಪಿ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಹಲವಾರು ಕಾಯಿಲೆಗಳು ನಮ್ಮನ್ನು ಕಾಡುತ್ತಿವೆ ಎಂದರು.
ಪ್ರತಿದಿನ ಒಂದು ಗಂಟೆ ವ್ಯಾಯಾಮ ಮತ್ತು ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳುವುದರಿಂದ ಹಲವಾರು ಕಾಯಿಲೆಗಳಿಂದ ದೂರವಿರಬಹುದಾಗಿದೆ. ಇದರ ಜೊತೆಗೆ ನಿಯಮಿತವಾಗಿ ಪೌಷ್ಟಿಕ ಆಹಾರ ಸೇವನೆ ಮಾಡುವುದು ಸೂಕ್ತ. ಕಾಯಿಲೆಗಳು ಬರುವ ಮುನ್ನವೇ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು. ನಮ್ಮ ಬ್ಯಾಂಕ್ ವತಿಯಿಂದ ಗ್ರಾಹಕರ ಮತ್ತು ಸದಸ್ಯರಿಗಾಗಿ ಆರೋಗ್ಯ ತಪಾಸಣಾ ಶಿಬಿರ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕ್ನ ಸಿಇಒ ವಿಜಯಕುಮಾರಿ, ಡಾ.ಅಶ್ವಿನ್ಕುಮಾರ್, ಪಾಲಿಕೆ ಮಾಜಿ ಸದಸ್ಯ ಚಂದ್ರಶೇಖರಯ್ಯ, ನಿರ್ದೇಶಕರಾದ ಪುಟ್ಟಸ್ವಾಮಿ, ನಟರಾಜು, ಸಿದ್ದಲಿಂಗಯ್ಯ, ಮಧು ಸೇರಿದಂತೆ ಬ್ಯಾಂಕ್ನ ಸಿಬ್ಬಂದಿ, ಸದಸ್ಯರು ಪಾಲ್ಗೊಂಡಿದ್ದರು.