ನವದೆಹಲಿ: ಮೂರು ಮಕ್ಕಳನ್ನು ಹೊಂದಿರುವ ವ್ಯಕ್ತಿ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಒಡಿಶಾದ ಬುಡಕಟ್ಟು ಜನಾಂಗದ ಸರಪಂಚರಾಗಿದ್ದ ಮೀನಾಸಿಂಗ್ ಮಾಜ್ಹಿ ಎಂಬುವವರು ತಮ್ಮನ್ನು ನೌಪಾದಾ ಜಿಲ್ಲೆಯ ಪಂಚಾಯತ್ ಸರಪಂಚ ಹುದ್ದೆಯಿಂದ ವಜಾಗೊಳಿಸಿದ್ದ ಒಡಿಶಾ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಎರಡು ಮಕ್ಕಳ ನೀತಿಗೆ ಬದ್ಧವಾಗುವ ಸಲುವಾಗಿ ತನ್ನ ಮೂರನೇ ಮಗುವನ್ನು ದತ್ತು ನೀಡಿ ಹುದ್ದೆ ಉಳಿಸಿಕೊಳ್ಳುವ ಕುರಿತೂ ಅರ್ಜಿಯಲ್ಲಿ ಮನವಿ ಮಾಡಿದ್ದರು ಈ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಹಾಗೂ ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್ ಮತ್ತು ಕೆ.ಎಂ.ಜೋಸೆಫ್ ಅವರನ್ನೊಳಗೊಂಡ ಪೀಠ ಈ ಮಹತ್ವದ ಆದೇಶ ನೀಡಿದೆ.
ಪಂಚಾಯತ್ ರಾಜ್ ಕಾಯ್ದೆ ಪ್ರಕಾರ, ಮೂರು ಮಕ್ಕಳನ್ನು ಹೊಂದಿದ ಪುರುಷ ಅಥವಾ ಮಹಿಳೆ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವುದನ್ನು ಮತ್ತು ಪಂಚಾಯತ್ ನಲ್ಲಿ ಯಾವುದೇ ಹುದ್ದೆ ಹೊಂದುವುದನ್ನು ನಿಷೇಧಿಸಲಾಗಿದೆ. ಒಂದು ಕುಟುಂಬದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳು ಹುಟ್ಟುವುದನ್ನು ನಿರ್ಬಂಧಿಸುವುದೇ ಈ ನಿಯಮಾವಳಿಯ ಉದ್ದೇಶ. ಹೆಚ್ಚುವರಿ ಮಕ್ಕಳನ್ನು ದತ್ತು ನೀಡುವ ಮೂಲಕ ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆಯಲ್ಲಿ ಲಭ್ಯವಿರುವ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳಲು ಅಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.